10 ಜನ, ಜಾನುವಾರುಗಳ ಕಚ್ಚಿದ ಹುಚ್ಚು ನಾಯಿ

ಗುರುಮಠಕಲ್,ಫೆ.23-ತಾಲ್ಲೂಕಿನ ಚಂಡ್ರಿಕಿ ಗ್ರಾಮದಲ್ಲಿ ಇಂದು ಮುಂಜಾನೆ ಹುಚ್ಚು ನಾಯಿಯೊಂದು ಸುಮಾರು 10 ಜನರು ಮತ್ತು ಜಾನುವಾರುಗಳನ್ನು ಕಚ್ಚಿ ಗಾಯಗೊಳಿಸಿದೆ.
ಗ್ರಾಮದೊಳಗೆ ಪ್ರವೇಶಿಸಿದ ಹುಚ್ಚು ನಾಯಿ ದಾರಿ ಹೋಕರನ್ನಷ್ಟೇ ಅಲ್ಲ ಮನೆಯಲ್ಲಿದ್ದವರ ಮೇಲೂ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ. ವೃದ್ಧರು, ಮಕ್ಕಳ ಮೇಲೂ ದಾಳಿ ಮಾಡಿದ್ದು, ಸುಮಾರು 10 ಜನರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ ದನದ ಕೊಟ್ಟಿಗೆಯಲ್ಲಿ, ಮನೆಯ ಮುಂದೆ ಕಟ್ಟಲಾಗಿದ್ದ ಆಕಳು, ಕರು ಮತ್ತು ಕುರಿ, ಆಡುಗಳನ್ನು ಸಹ ನಾಯಿ ಅಟ್ಟಾಡಿಸಿ ಕಚ್ಚಿ ಗಾಯಗೊಳಿಸುವುದರ ಮೂಲಕ ಗ್ರಾಮದಲ್ಲಿ ಕೆಲಕಾಲ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು.
ಇದರಿಂದ ಭಯ ಭೀತರಾದ ಗ್ರಾಮಸ್ಥರು ಕೆಲಕಾಲ ಮನೆಯ ಬಾಗಿಲು ಚಿಲಕ ಹಾಕಿಕೊಂಡು ಮನೆಯಲ್ಲಿಯೇ ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಗ್ರಾಮಸ್ಥರು ಹುಚ್ಚು ನಾಯಿಯನ್ನು ಬೆನ್ನಟ್ಟಿ ಹೊಡೆದು ಸಾಯಿಸಿದ್ದಾರೆ.
ನಾಯಿ ಕಚ್ಚಿ ಗಾಯಗೊಂಡವರನ್ನು ಗುರುಮಠಕಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.