10 ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಿದ ಖಾಕಿ ಟೀಮ್

ಬೀದರ:ಮೇ.29: ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ನಂತರ ಜಿಲ್ಲೆಯಲ್ಲೂ ಸೋಂಕಿತರ ಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನುವ ಗ್ರಹಿಕೆಯಿಂದ ಮಹಾರಾಷ್ಟ್ರದ ಗಡಿಯಲ್ಲಿ ಸ್ಥಾಪಿಸಲಾದ ಏಳು ಹಾಗೂ ತೆಲಂಗಾಣ ಗಡಿಯ ಮೂರು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.

ಜಿಲ್ಲಾಡಳಿತ ನೆರೆಯ ರಾಜ್ಯಗಳಿಂದ ಬರುವ ಪ್ರತಿಯೊಂದು ವಾಹನ ತಪಾಸಣೆ ನಡೆಸುತ್ತಿದೆ. ವೈದ್ಯಕೀಯ ಕಾರಣಗಳಿಂದ ಸಂಚರಿಸುತ್ತಿರುವವರಿಗೆ ದಾಖಲೆ ಪರಿಶೀಲಿಸಿ ಅನುಮತಿ ಕೊಡಲಾಗುತ್ತಿದೆ. ಉಳಿದವರನ್ನು ಮರಳಿ ಕಳಿಸಲಾಗುತ್ತಿದೆ. ಶೇಕಡ 50ರಷ್ಟು ಜನ ವೈದ್ಯಕೀಯ ಪ್ರಮಾಣಪತ್ರಗಳನ್ನು ಹಿಡಿದುಕೊಂಡೇ ಜಿಲ್ಲೆಯೊಳಗೆ ಬರುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ತೆಲಂಗಾಣ ಪೊಲೀಸರು ಸಹ ವೈದ್ಯಕೀಯ ದಾಖಲೆಗಳನ್ನು ನೋಡಿಯೇ ತಮ್ಮ ರಾಜ್ಯದೊಳಗೆ ಪ್ರವೇಶ ನೀಡುತ್ತಿದ್ದಾರೆ.ರಾಜಧಾನಿಗೆ ಸಂದೇಶ ರವಾನೆ: ಬೀದರ್‌ ತಾಲ್ಲೂಕಿನ ಮಲ್ಕಾಪುರ ಪಂಚಾಯಿತಿ ವ್ಯಾಪ್ತಿ ಗಡಿ ಹಾಗೂ ಭಂಗೂರ್‌ ಸಮೀಪ ತೆಲಂಗಾಣದ ಪೊಲೀಸರೂ ಚೆಕ್‌ಪೋಸ್ಟ್‌ ಸ್ಥಾಪಿಸಿದ್ದಾರೆ. ಜಿಲ್ಲೆಯಿಂದ ಆಂಬುಲನ್ಸ್‌ನಲ್ಲಿ ಹೈದರಾಬಾದ್‌ಗೆ ಹೋಗುತ್ತಿರುವ ರೋಗಿಗಳ ಮೇಲೆ ನಿಗಾ ಇಟ್ಟಿದ್ದಾರೆ.
ಚೆಕ್‌ಪೋಸ್ಟ್‌ನಲ್ಲೇ ಪ್ರತಿ ರೋಗಿಯ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ದಾಖಲಿಸಿಕೊಂಡು ಹೈದರಾಬಾದ್‌ನಲ್ಲಿ ಸ್ಥಾಪಿಸಲಾದ ವಾರ್‌ರೂಮ್‌ಗೆ ಮಾಹಿತಿ ಕಳಿಸುತ್ತಿದ್ದಾರೆ. ಕೋವಿಡ್‌ ಸೋಂಕಿತರು ಇದ್ದರೆ ಎಚ್ಚರ ವಹಿಸುವಂತೆ ಸಂದೇಶವನ್ನೂ ರವಾನಿಸುತ್ತಿದ್ದಾರೆ.

ತೆಲಂಗಾಣ ಸರ್ಕಾರದ ಆದೇಶದಂತೆ ಕೃಷಿ ಉತ್ಪನ್ನ ಹಾಗೂ ಸರಕು ಸಾಗಣೆ ವಾಹನಗಳಿಗೆ ಅನುಮತಿ ನೀಡಲಾಗುತ್ತಿದೆ. ಬೀದರ್‌ ಜಿಲ್ಲೆಯಿಂದ ಹೈದರಾಬಾದ್‌ಗೆ ಬರುತ್ತಿರುವ ಕೋವಿಡ್‌ ಸೋಂಕಿತರ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿ ತಿಳಿಸಿದರು.

ಮಹಾರಾಷ್ಟ್ರದಲ್ಲೂ ಬಿಗಿ: ಜಿಲ್ಲೆಯಿಂದ ಮಹಾರಾಷ್ಟ್ರದ ಊರುಗಳಿಗೆ ತೆರಳುವ ಮಾರ್ಗದಲ್ಲಿ ಮಹಾರಾಷ್ಟ್ರ ಸರ್ಕಾರ ಚೆಕ್‌ಪೋಸ್ಟ್‌ ನಿರ್ಮಿಸಿ ತಪಾಸಣೆ ಮುಂದುವರಿಸಿದೆ. ಬೇರೆ ಊರುಗಳಿಂದ ಗ್ರಾಮಕ್ಕೆ ಮರಳುವವರ ಮೇಲೆ ನಿಗಾ ವಹಿಸಬೇಕು. ಸೋಂಕು ಅಧಿಕ ಇರುವ ನಗರ, ಪಟ್ಟಣಗಳಿಂದ ಬಂದರೆ ಅವರನ್ನು ಹೋಮ್‌ ಕ್ವಾರಂಟೈನ್‌ನಲ್ಲಿ ಇರಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಿದೆ.

ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಯೇ ಗ್ರಾಮದ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್‌ ಅಳವಡಿಸಿದ್ದಾರೆ. ಕೆಲವು ಕಡೆ ಬೊಂಬುಗಳನ್ನು ಕಟ್ಟಿ ಊರಿನ ಒಳಗೆ ಹಾಗೂ ಹೊರಗೆ ಹೋಗಲು ಪ್ರತ್ಯೇಕ ಮಾರ್ಗ ನಿರ್ಮಿಸಿ ಪ್ರತಿಯೊಬ್ಬರ ಮೇಲೆ ನಿಗಾ ಇಟ್ಟಿದ್ದಾರೆ.

ಗಡಿ ಗ್ರಾಮಗಳಲ್ಲಿ ವಾಸವಾಗಿರುವ ಅನೇಕ ಜನರ ಹೊಲಗಳು ಗಡಿ ಆಚೆ, ಈಚೆಗೂ ಇವೆ. ಕೃಷಿ ಕಾರ್ಯಗಳಿಗೆ ತೆರಳುತ್ತಿರುವ ವ್ಯಕ್ತಿಗಳಿಗೆ ಅಡೆತಡೆ ಉಂಟು ಮಾಡುತ್ತಿಲ್ಲ ಎಂದು ಕಮಲನಗರದ ಸಾಮಾಜಿಕ ಕಾರ್ಯಕರ್ತ ಶಿವರಾಜ್‌ ಹೇಳುತ್ತಾರೆ.

ಕಮಲನಗರ ತಾಲ್ಲೂಕಿನ ಬಹುತೇಕ ಗ್ರಾಮಗಳು ಉದಗಿರ ಮಾರುಕಟ್ಟೆಯನ್ನೇ ಅವಲಂಬಿಸಿವೆ. ಕಮಲನಗರದಿಂದ 16 ಕಿ.ಮೀ ಅಂತರದಲ್ಲಿ ಉದಗಿರ ಇದೆ. ದಿನಸಿ ಖರೀದಿಗೆ ಗಡಿಯಾಚೆ ಹೋಗಿ ಬರುತ್ತಿರುವ ವ್ಯಕ್ತಿಗಳಿಗೆ ಉಭಯ ರಾಜ್ಯಗಳ ಪೊಲೀಸರು ಯಾವುದೇ ರೀತಿಯ ಅಡ್ಡಿ ಉಂಟು ಮಾಡಿಲ್ಲ. ಬೆಳಿಗ್ಗೆ ಅವಕಾಶ ಕಲ್ಪಿಸಿದ ಎರಡು ತಾಸಿನ ಅವಧಿಯಲ್ಲಿ ದಿನಸಿ ಖರೀದಿಸಿ ಜನ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ ಎಂದು ಹೇಳುತ್ತಾರೆ.