10 ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ : ಶಾಸಕ ಪಾಟೀಲ್

ಹುಮನಾಬಾದ್:ಮಾ.5: ಸರಕಾರದ ಯೋಜನೆಗಳಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ ಅಧಿಕಾರಿಗಳು ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದರು.
ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ 10 ಕೋಟಿ ಅನುದಾನದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಪಟ್ಟಣದಲ್ಲಿ ಸಾರ್ವಜನಿಕರು ಸುಗಮವಾಗಿ ಓಡಾಡುವ ನಿಟ್ಟಿನಲ್ಲಿ ಮಾಜಿ ಸಂಸದ ದಿ. ರಾಮಚಂದ್ರ ವೀರಪ್ಪ ಆರ್ಯ ವೃತ್ತದಿಂದ ಕೆಇಬಿ ರಸ್ತೆ ಶಿವಾಜಿ ಮಹಾರಾಜರ ವೃತ್ತದ ವರೆಗೆ ನಗರ ಪ್ರದೇಶಗಳ ಮಾದರಿಯಲ್ಲಿ ಕೋಟ್ಯಾಂತರ ರೂಪಾಯಿ ಅನುದಾನ ವೆಚ್ಚ ಮಾಡುವ ಮೂಲಕ ಹೈಟೇಕ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭ ಹಂತದಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗರದಾರರು ಹೆಚ್ಚಿನ ಶ್ರಮ ವಹಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಜತೆಯಲ್ಲಿ ರಸ್ತೆ ನಿರ್ಮಾಣ ಹಂತದಲ್ಲಿ ಕಳಪೆ ಕಾಮಗಾರಿ ಕೈಗೊಳ್ಳುತ್ತಿರುವುದನ್ನು ಸಾರ್ವಜನಿಕರ ಗಮನಕ್ಕೆ ಬಂದರೆ ನನಗೆ ಮಾಹಿತಿ ತಿಳಿಸಿ ಬಳಿಕ ನಾನು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ಪುರಸಭೆ ಅಧ್ಯಕ್ಷೆ ನೀತು ಮಲ್ಲಿಕಾರ್ಜುನ್ ಶರ್ಮಾ, ಪುರಸಭೆ ಸದಸ್ಯ ವಿಜಯಕುಮಾರ ದುರ್ಗದ್, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್, ಪುರಸಭೆ ಸದಸ್ಯ ಅಫ್ಸರಮಿಯ, ಪುರಸಭೆ ಸದಸ್ಯ ಗುಂಡಪ್ಪ ಹೊನ್ನಕೇರಿ, ಉದ್ಯಮಿ ಧನರಾಜ ತಾಳಂಪಳ್ಳಿ, ಪ್ರಮುಖರಾದ ಮಲ್ಲಿಕಾರ್ಜುನ ಶರ್ಮಾ, ಸಚ್ಚಿದಾನಂದ ಮಠಪತಿ, ಅಶೋಕ ಸೊಂಡೆ, ಬಾಬುರಾವ ಪರಮಶಟ್ಟಿ, ಧರ್ಮರೆಡ್ಡಿ, ಅಶೋಕಕುಮಾರ ಚಳಕಾಪೂರೆ, ಪ್ರಕಾಶ ಕಾಡಗೊಂಡ ಸೇರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.