10 ಕೆ ಮ್ಯಾರಥಾನ್ ನೋಂದಣಿಗೆ ಚಾಲನೆ

ತುಮಕೂರು, ಆ. ೨೯- ಹೃದ್ರೋಗ ಕಾಳಜಿಗಾಗಿ ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ಪ್ರತಿ ವರ್ಷ ಅ. ೧ ರಂದು ನಡೆಯುವ ೧೦ ಕೆ ಮ್ಯಾರಥಾನ್ ನೋಂದಣಿಗೆ ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ. ಎಸ್. ಪರಮೇಶ್ ಚಾಲನೆ ನೀಡಿದರು.
ನಂತರ ಮ್ಯಾರಥಾನ್ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಸಿದ್ಧಗಂಗಾ ಆಸ್ಪತ್ರೆ ವಿವಿಧ ಪ್ರಾಯೊಜಕರ ಸಹಕಾರದೊಂದಿಗೆ ಮ್ಯಾರಥಾನ್ ನಡೆಸುತ್ತಾ ಹೃದ್ರೋಗ ಕಾಳಜಿಯ ಜಾಗೃತಿ ಮೂಡಿಸುತ್ತಿದ್ದು, ದಾಖಲೆಯ ಮಟ್ಟಕ್ಕೆ ಸಾರ್ವಜನಿಕರ ಸ್ಪಂದನೆ ವ್ಯಕ್ತವಾಗುತ್ತಾ ಬಂದಿದೆ. ಹೃದ್ರೋಗ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ನಡೆಸುತ್ತಿರುವ ಈ ಮ್ಯಾರಥಾನ್ ಸಕಾಲಿಕವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನೋಂದಣಿ ಮಾಡಿಕೊಂಡು, ಭಾಗವಹಿಸಬೇಕು ಎಂದರು.
ಆಸ್ಪತ್ರೆ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಭಾನುಪ್ರಕಾಶ್ ಹೆಚ್.ಎಂ.ಮಾತನಾಡಿ, ದೈನಂದಿನ ಜೀವನದಲ್ಲಿ ಉಂಟಾಗುವ ಒತ್ತಡ, ಅಸಮರ್ಪಕ ಆಹಾರ ಕ್ರಮ, ದೈಹಿಕ ಚಟುವಟಿಕೆಗಳ ಕೊರತೆ ಮುಂತಾದ ಕಾರಣಗಳಿಂದ ಹೃದ್ರೋಗ ಸಮಸ್ಯೆಗಳು ಹೆಚ್ಚುತ್ತಿವೆ. ಹಾಗಾಗಿ ನಮ್ಮ ಆಸ್ಪತ್ರೆ ನಡೆಸುತ್ತಿರುವ ಈ ಮ್ಯಾರಥಾನ್ ಮುಖಾಂತರ ಹೃದ್ರೋಗ ಸಮಸ್ಯೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಉಪನ್ಯಾಸ ಕಾರ್ಯಕ್ರಗಳು ಕೂಡ ನಡೆಯುತ್ತಿದೆ. ೧೦ ಕಿ.ಮೀ, ೫ ಕಿ.ಮೀ, ೨ ಕಿ.ಮೀ ನಂತೆ ಮೂರು ವಿಭಾಗದಲ್ಲಿ ವಿವಿಧ ವಯೋಮಾನ ಹಾಗೂ ಲಿಂಗದ ಆಧಾರದ ಮೇಲೆ ಮ್ಯಾರಥಾನ್ ನಡೆಯಲಿದ್ದು, ಸಾರ್ವಜನಿಕರು ನೋಂದಣಿಗಾಗಿ ದೂರವಾಣಿ ಸಂಖ್ಯೆ ೭೬೨೪೯೮೧೮೭೯ ಅಥವಾ ಆಸ್ಪತ್ರೆಯನ್ನು ಸಂಪರ್ಕಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ನಿರಂಜನಮೂರ್ತಿ, ಹೃದ್ರೋಗ ತಜ್ಞರಾದ ಡಾ. ಶರತ್‌ಕುಮಾರ್ ಜೆ.ವಿ, ಸಿಇಓ ಡಾ.ಸಂಜೀವಕುಮಾರ್ ಉಪಸ್ಥಿತರಿದ್ದರು.