ಬೆಂಗಳೂರು, ಜು ೭: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್‌ದಾರರಿಗೆ ಅಂತ್ಯೋದಯ ಫಲಾನುಭವಿಗಳಿಗೆ ೫ ಕೆ.ಜಿ ಸೇರಿದಂತೆ ಒಟ್ಟು ೧೦ ಕೆ.ಜಿ ಆಹಾರ ಧಾನ್ಯವನ್ನು ನೀಡಲು ಬದ್ಧವಾಗಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ವೇಲೆ ಸರ್ವಜ್ಞನ ಕವಿವಾಣಿ “ಅನ್ನ ದೇವರಿಗಿಂತ ಇನ್ನು ದೇವರು ಇಲ್ಲ’ ಎಂಬ ಕವಿವಾಣಿಯನ್ನು ಉಲ್ಲೇಖಿಸಿದರು.
ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಆಶಯದೊಂದಿಗೆ ೨೦೧೩ ರಲ್ಲಿ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿತು. ಇಂದಿನ ಸರ್ಕಾರ ಈ ಯೋಜನೆಯಡಿ ವಿತರಿಸುವ ಧಾನ್ಯದ ಪ್ರಮಾಣ ಕಡಿತಗೊಳಿಸಿತ್ತು. ಈಗ ಕೇಂದ್ರ ಸರ್ಕಾರ ನೀಡುತ್ತಿರುವ ೫ ಕೆ.ಜಿ ಜೊತೆಗೆ ೧೦ ಕೆ.ಜಿ ಆಹಾರಧಾನ್ಯ ನೀಡುತ್ತಿದ್ದೇವೆ ಎಂದರು.
ಕೇಂದ್ರ ಸರ್ಕಾರ ಅಕ್ಕಿ ನೀಡುವ ವಿಚಾರದಲ್ಲಿ ರಾಜಕೀಯ ಮಾಡಿ ಬಡವರ ಅನ್ನ ಕಸಿಯುವ ಕೆಲಸ ಮಾಡುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಬುಡಮೇಲು ಮಾಡುತ್ತದೆ. ಶೀಘ್ರದಲ್ಲಿ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಲಭ್ಯವಿರುವ ಆಹಾಯ ಧಾನ್ಯವನ್ನು ಬಡವರಿಗೆ ಹಂಚಿಕೆ ಮಾಡುವುದು ನಮ್ಮ ಆಶಯವಾಗಿದೆ ಎಂದರು.
ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತಿದ್ದೇವೆ. ಭತ್ತ ಬೆಳೆಯುವ ವಿವಿಧ ರಾಜ್ಯಗಳನ್ನು ಸಂಪರ್ಕಿಸಿದ್ದು, ಅಕ್ಕಿ ಖರೀದಿಗೆ ಮಾತುಕತೆ ನಡೆಸಿದ್ದೇವೆ.
ಪ್ರತಿ ಕಿ.ಲೋ ಆಹಾರಧಾನ್ಯಕ್ಕೆ ವೆಚ್ಚವಾಗುವ ಮೊತ್ತವನ್ನು ಜುಲೈ ತಿಂಗಳಿನಿಂದಲೇ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಸಂದಾಯ ಮಾಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ರಾಜ್ಯದ ಜನತೆಗೆ ನೀಡಿರುವ ವಾಗ್ದಾನದಿಂದ ಹಿಂದ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅನ್ನಭಾಗ್ಯ ಯೋಜನೆ ಜಾರಿಯಿಂದಾಗಿ ಬಡತನ ರೇಖೆಗಿಂತ ಕೆಳಗಿರುವ ೪.೪೨ ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಈ ಯೋಜನೆ ಜಾರಿಗೆ ಪ್ರತಿ ವರ್ಷಕ್ಕೆ ೧೦ ಸಾವಿರ ಕೋಟಿ ರೂ. ಗಳನ್ನು ವೆಚ್ಚ ಮಾಡುತ್ತೇವೆಂದು ಹೇಳಿದರು.
ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಅವಕಾಶ
ಬೆಂಗಳೂರು, ಜು. ೭- ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ ೯೫ಕ್ಕೆ ತಿದ್ದುಪಡಿ ತಂದು ಜಮೀನನ್ನು ಸ್ವಯಂ ಘೋಷಣೆ ಮೂಲಕ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಗೆ ಒಳಪಡಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಕಂದಾಯ ಇಲಾಖೆ ಅತ್ಯಂತ ಮಹತ್ವ ಇಲಾಖೆಯಾಗಿದ್ದು, ದಿನನಿತ್ಯ ಸ್ತ್ರೀಸಾಮಾನ್ಯರು ಈ ಇಲಾಖೆಯಿಂದ ಸೇವೆ ಪಡೆಯುತ್ತಲೇ ಇರುತ್ತಾರೆ. ಈ ಇಲಾಖೆಯಲ್ಲಿ ಭ್ರಷ್ಟಚಾರ ಮುಕ್ತ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ. ಆಡಳಿತದಲ್ಲಿ ದಕ್ಷತೆ ಹೆಚ್ಚಿಸಿ ಇಲಾಖೆಗಳ ಸೇವೆಗಳನ್ನು ಇನ್ನಿಷ್ಟು ಸರಳೀಕರಣಗೊಳಿಸಿ, ಸಕಲದಲ್ಲಿ ಸೇವೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ ಭಾಷಣದಲ್ಲಿ ತಿಳಿಸಿದರು.
ಪರಿಶಿಷ್ಟ ಜಾತಿಮತ್ತು ಪರಿಶಿಷ್ಟ ಪಂಗಡಗಳಿಗೆ ಮುಂಜಾರಾಗಿರುವ ಜಮೀನು ಮರುಸ್ಥಾಪಿಸಲು ಕಾಲಮಿತಿಯ ಕಾಯ್ದೆಯಲ್ಲೇ ನಿಗದಿ ಪಡಿಸಲು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ) ಅಧಿನಿಯಮ ೧೯೭೮ಕ್ಕೆ ತಿದ್ದುಪಡಿ ತರಲಾಗುವುದು ಎಂದರು.
ಪ್ರತಿಯೊಂದು ಕೆಲಸಕ್ಕಾಗಿ ಜನರು ಬೆಂಗಳೂರಿಗೆ ಬರಲು ತಪ್ಪಿಸಲು ಜಿಲ್ಲಾ ಮಟ್ಟದಲ್ಲಿ ಎಲ್ಲ ಸರ್ಕಾರಿ ಸೇವೆಗಳನ್ನು ಒಂದೇ ಸೂರಿನಡಿಯಲ್ಲಿ ತರಲು ಜಿಲ್ಲಾಡಳಿತ ಕಚೇರಿ ಸಂಕೀರರ್ಣ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ.
ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ, ರಾಯಚೂರು, ಉತ್ತರ ಕನ್ನಡ, ಚಿತ್ರದುರ್ಗ, ಹಾಸನ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.