10 ಆಕ್ಸಿಜನ್ ಕಾನ್ಸನ್ಟ್ರೇಟರ್‍ಗಳು ವಿತರಣೆ

ಬೀದರ:ಜೂ.10:ಕೊರೊನಾ ಎರಡನೇ ಅಲೆಯಿಂದ ಸಾಕಷ್ಟು ಜನ ಆಕ್ಸಿಜನ್ ಕೊರತೆಯಿಂದ ನರಳಾಡಿದ್ದಾರೆ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಮನಗೊಂಡು ಉಚಿತವಾಗಿ ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ವಿತರಿಸುವ ಕ್ರಮ ಕೈಗೊಂಡಿದೆ ಎಂದು ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಕ್ಷೇತ್ರ ವ್ಯಾಪ್ತಿಯ ಕಮಠಾಣಾ ಗ್ರಾಮದಲ್ಲಿ ‘ಶಾಸಕರು ಮತ್ತು ಅವರ ಸ್ನೇಹಿತರು ಹಾಗೂ ನಯೋನಿಕ ಟ್ರಸ್ಟ್ ಸಹಯೋಗದಲ್ಲಿ ಕ್ಷೇತ್ರ ವ್ಯಾಪ್ತಿಯ 09 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಒಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ ತಲಾ ಒಂದರಂತೆ 10 ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ವಿತರಿಸಿ’ ಮಾತನಾಡಿದ ಅವರು, ನನ್ನ ಕ್ಷೇತ್ರ ವ್ಯಾಪ್ತಿಯ ಕಮಠಾಣಾ, ಆಣದೂರು, ಗೋಡಂಪಳ್ಳಿ, ಮನ್ನಳ್ಳಿ, ಬೇಮಳಖೇಡ, ಚಾಂಗ್ಲೇರಾ, ಬಗದಲ್, ನಿರ್ಣಾ, ರಂಜೋಖೇಣಿ ಸೇರಿ ಎಲ್ಲಾ ಒಂಬತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಮನ್ನಾಎಖ್ಖೇಳ್ಳಿಯ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಒಂದೊಂದು ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ವಿತರಿಸುವ ಕೆಲಸ ಮಾಡಿದ್ದೇವೆ.
ಅವುಗಳಲ್ಲಿ 05 ಆಕ್ಸಿಜನ್ ಕಾನ್ಸನ್ಟ್ರೇಟರ್ 05 ಲೀಟರ್ ಹಾಗೂ 05 ಆಕ್ಸಿಜನ್ ಕಾನ್ಸನ್ಟ್ರೇಟರ್ 10 ಲೀಟರ್ ಸಾಮಥ್ರ್ಯದವುಗಳಾಗಿವೆ. 10 ಲೀಟರ್ ಸಾಮಥ್ರ್ಯದ ಕಾನ್ಸನ್ಟ್ರೇಟರ್ ಗಳಿಂದ ಇಬ್ಬರಿಗೆ ಆಕ್ಸಿಜನ್ ನೀಡಬಹುದು. ಹಳ್ಳಿಗಳಲ್ಲಿ ಆಕ್ಸಿಜನ್ ಗಾಗಿ ಪರದಾಡಬಾರದು ಎಂಬ ಕಾರಣದಿಂದಾಗಿ ಸದ್ಯ ಒಂದೊಂದು ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ಒಂದೊಂದು ನೀಡುತ್ತೇವೆ.
ನಾವು, ನಮ್ಮ ಸ್ನೇಹಿತರು ಸೇರಿ ಸದ್ಯ ಆಕ್ಸಿಜನ್ ಕಾನ್ಸನ್ಟ್ರೇಟರ್ ವಿತರಿಸುತ್ತಿದ್ದೇವೆ. ಮೂರನೇ ಅಲೆ ಬರಬಹುದು ಎಂಬ ಮುನ್ನೆಚ್ಚರಿಕೆಯಿಂದ ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಬಹಳಷ್ಟು ಕಡೆಗಳಲ್ಲಿ ಜನರೇಟರ್ ವ್ಯವಸ್ಥೆ ಇದೆ. ಕಮಠಾಣಾಕ್ಕೆ ಜನರೇಟರ್ ವ್ಯವಸ್ಥೆ ಮಾಡುತ್ತಿದ್ದೇವೆ. ಮೂರನೇ ಅಲೆಗೆ ಸಜ್ಜಾಗುವ ಕೆಲಸ ಮಾಡಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಕೃಷ್ಟ ರೋಗ ವಿಭಾಗದ ವೈದ್ಯಾಧಿಕಾರಿ ಮನೋಜ್ ಬಿರಾದರ್, ಶ್ರೀಮಂತ್ ಪಾಟೀಲ್, ಕಿರಣ್ ಪಾಟೀಲ್, ಕಮಠಾಣಾ ವೈದ್ಯಾಧಿಕಾರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖಂಡರು ಸೇರಿದಂತೆ ಅನೇಕರಿದ್ದರು.