10ರಿಂದ 15 ಮಾಜಿ, ಹಾಲಿ ಶಾಸಕರ ಸೇರ್ಪಡೆ

ಸಂಜೆವಾಣಿ ನ್ಯೂಸ್
ಮೈಸೂರು: ಆ.19:- ಬಿಜೆಪಿ ಮತ್ತು ಜೆಡಿಎಸ್‍ನಿಂದ 10ರಿಂದ 15 ಜನ ಮಾಜಿ ಹಾಗೂ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 10ರಿಂದ 15 ಜನ ಹಾಲಿ ಹಾಗೂ ಮಾಜಿ ಶಾಸಕರು ಕಾಂಗ್ರೆಸ್‍ಗೆ ಬರಲು ಸಿದ್ಧರಿದ್ದಾರೆ. ಸದ್ಯಕ್ಕೆ ಅವರ ಹೆಸರು ಹೇಳಲು ಸಾಧ್ಯವಿಲ್ಲ. ಎಲ್ಲರ ಜೊತೆಯೂ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿದೆ. ಆದರೆ ಶಾಸಕರು ಬರುವುದು ಖಚಿತ ಎಂದು ಹೇಳುವ ಮೂಲಕ ಆಪರೇಷನ್ ಹಸ್ತಕ್ಕೆ ಸಿದ್ಧತೆ ನಡೆಯುತ್ತಿರುವುದನ್ನು ದೃಢಪಡಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್, ಲೋಕಸಭೆ ಚುನಾವಣೆಯಲ್ಲೂ ಗೆಲುವಿಗಾಗಿ ಸಿದ್ಧತೆ ನಡೆಸಿದೆ. ಒಳಗೊಳಗೆ ಹಲವು ಬಿಜೆಪಿ ನಾಯಕರಿಗೆ ಗಾಳ ಹಾಕಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ಬಿಜೆಪಿ ಪಾಳಾಯದಲ್ಲಿ ಆತಂಕ ಸೃಷ್ಟಿಸಿದೆ.
ಕೆಲಸ ಇಲ್ಲದವರ ಮಾತು!
ಗುತ್ತಿಗೆದಾರರಿಂದ ಸಚಿವರು ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪದ ಬಗ್ಗೆ ಮಾತನಾಡಿ, ಕೆಲಸ ಇಲ್ಲದವರು ಇದನ್ನೆಲ್ಲಾ ಮಾತನಾಡುತ್ತಾರೆ. ಅದಕ್ಕೆಲ್ಲ ಪ್ರತಿಕ್ರಿಯೆ ಕೊಡಬೇಕಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ವರ್ಷ ಪೇಮೆಂಟ್ ಕೊಟ್ಟಿರಲಿಲ್ಲ. ನಾವು ಬಂದು ಕೇವಲ ಎರಡೂವರೆ ತಿಂಗಳಾಗಿದೆ. ಅನುದಾನವನ್ನು ಒಂದೇ ಸಲ ಎಷ್ಟು ಅಂತಾ ಕೋಡೋಕೆ ಆಗುತ್ತದೆ. ಕೆಲವರು ಬಾಯಿ ಚಪಲಕ್ಕೆ ಏನೇನೋ ಮಾತನಾಡ್ತಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಯಾರ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದರು.