1-9 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಲ್ಲದೆ ಪಾಸ್

ಬೆಂಗಳೂರು, ಏ.೨೦-ಕೊರೋನಾ ಸೋಂಕಿನ ಎರಡನೇ ಅಲೆ ತೀವ್ರ ಹಿನ್ನೆಲೆ ಒಂದರಿಂದ ಒಂಭತ್ತನೇ ತರಗತಿಗಳ ಮೌಲ್ಯಾಂಕನ ವಿಶ್ಲೇಷಣೆ ಮತ್ತು ಫಲಿತಾಂಶ ಪ್ರಕಟಣೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ತರಗತಿವಾರು ನಿರ್ಧಾರ ಕೈಗೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಒಂದರಿಂದ ಐದನೇ ತರಗತಿ ಮತ್ತು ಆರರಿಂದ ಒಂಭತ್ತನೇ ತರಗತಿಗಳವರೆಗೆ ಮೌಲ್ಯಾಂಕನ ಕುರಿತು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಅದರಂತೆ ತಜ್ಞರು ನೀಡಿದ ಅಭಿಪ್ರಾಯದಂತೆ ೧ ರಿಂದ ೯ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಪಾಸ್ ಮಾಡಲು ಸೂಚಿಸಲಾಗಿದೆ.
೧ರಿಂದ ೯ನೇ ತರಗತಿಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದಲ್ಲಿ ನಿರ್ವಹಿಸಿದ ದಾಖಲೆಗಳು, ಸಂವಹನದ ಆಧಾರದ ಮೇಲೆ ಕೆಲವು ಶಾಲೆಯವರು ಆನ್‌ಲೈನ್ ಮೂಲಕ ತರಗತಿ ನಿರ್ವಹಿಸಿದ್ದಲ್ಲಿ ಆ ಸಂದರ್ಭದಲ್ಲಿ ಅವಲೋಕಿಸಿದ ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಮಕ್ಕಳಿಗೆ ನೀಡಿದ್ದ ಪ್ರಬಂಧ, ಗೃಹ ಕೆಲಸ ಇತರೆ ಚಟುವಟಿಕೆಗಳನ್ನಾಧರಿಸಿದ ಕೃತಿ ಸಂಪುಟ, ಚೈಲ್ಡ್ ಪ್ರೊಫೈಲ್, ಇತರೆ ಲಭ್ಯ ದಾಖಲೆಗಳನ್ನು ಅವಲೋಕಿಸಿ ಈವರೆವಿಗೆ ಪೂರೈಸಿದ ಪಠ್ಯವಸ್ತು, ಸಾಮರ್ಥ್ಯ ಕಲಿಕಾ-ಫಲಗಳ ಸಾಧನೆ ಮತ್ತು ಕೊರತೆಗಳನ್ನು ಶಾಲಾ ಹಂತದಲ್ಲಿ ಸಿಸಿಇ ನಿಯಮಗಳಂತೆ ವಿಶ್ಲೇಷಿಸಿ ಪ್ರಗತಿ ಪತ್ರದಲ್ಲಿ ದಾಖಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ತರಗತಿಗೆ ಬಡ್ತಿ ನೀಡುವುದು ಮತ್ತು ಅದನ್ನು ಪ್ರಗತಿ ಪತ್ರದಲ್ಲಿ ದಾಖಲಿಸುವುದು ಸೇರಿದಂತೆ ಈ ಎಲ್ಲ ಪ್ರಕ್ರಿಯೆಗಳನ್ನು ಏಪ್ರಿಲ್ ೩೦ರೊಳಗೆ ನಿರ್ವಹಿಸಿ ಫಲಿತಾಂಶ ದಾಖಲಿಸಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

೧ ರಿಂದ ೫ನೇ ತರಗತಿ: ಒಂದರಿಂದ ಐದನೇ ತರಗತಿವರೆಗೆ ಶಾಲಾ ಹಂತದಲ್ಲಿ ಮಕ್ಕಳ ಪ್ರಗತಿ ವಿಶ್ಲೇಷಿಸಿ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗಿದೆ.
ಹಾಗೆಯೇ ಈ ತರಗತಿಗಳ ವಿದ್ಯಾರ್ಥಿಗಳು ಶಾಲೆಗೆ ಭೌತಿಕವಾಗಿ ಹಾಜರಾಗಲು ಇದುವರೆವಿಗೂ ಕೋವಿಡ್-೧೯ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಅವಕಾಶ ಕಲ್ಪಿಸದೇ ಇರುವ ಹಿನ್ನೆಲೆಯಲ್ಲಿ ಈ ಮಕ್ಕಳಿಗೆ ಪ್ರತ್ಯೇಕ ಆನ್‌ಲೈನ್ ಇಲ್ಲವೇ ಆಫ್‌ಲೈನ್ ಮೂಲಕವೂ ಸಹ ಮೌಲ್ಯಾಂಕನ ಮಾಡಬಾರದು. ಮೌಲ್ಯಾಂಕನಕ್ಕಾಗಿ ಈ ಮಕ್ಕಳನ್ನು ಶಾಲೆಗಳಿಗೆ ಹಾಜರಾಗುವಂತೆ ಸೂಚಿಸಬಾರದು ಎಂದು ತಿಳಿಸಿದ್ದಾರೆ.

೬ರಿಂದ ೯ತರಗತಿಗಳು: ೬ರಿಂದ ೯ನೇ ತರಗತಿಗಳ ಮಕ್ಕಳು ಭೌತಿಕವಾಗಿ ತರಗತಿಗಳಿಗೆ ಹಾಜರಾಗುತಿದ್ದರು. ಹಾಗೆಯೇ ದೂರದರ್ಶನ ಚಂದನ ವಾಹಿನಿಯ ಸಂವೇದ, ಇ-ಕಲಿಕಾ, ಆನ್‌ಲೈನ್ ಸೇರಿದಂತೆ ವಿವಿಧ ಪ್ರಕಾರದಲ್ಲಿ ಪಾಠ ಪ್ರವಚನ ಆಲಿಸಿರುವ ಹಿನ್ನಲೆಯಲ್ಲಿ ಈ ಮೇಲಿನ ಪಾಠ ಪ್ರವಚನ, ಕಲಿಕಾ ಪೂರಕ ಚಟುವಟಿಕೆ, ಪ್ರಾಜೆಕ್ಟ್ ಚಟುವಟಿಕೆಗಳ ನೆಲೆಯಲ್ಲಿ ಈಗಾಗಲೇ ಕೈಗೊಂಡಿರುವ ರೂಪಣಾತ್ಮಕ ಮೌಲ್ಯಮಾಪನ ಹಾಗೂ ಸಂಕಲನಾತ್ಮಕ ಮೌಲ್ಯಮಾಪನವನ್ನು ನಿರ್ವಹಿಸಿದ ದಾಖಲೆಗಳನ್ನಾಧರಿಸಿ ಪಡೆದ ಅಂಕಗಳನ್ನು ೧೦೦ಕ್ಕೆ ವೃದ್ಧಿಸಿ ಶ್ರೇಣಿ ನಮೂದಿಸಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುತ್ತದೆ.

ಇನ್ನು, ೬ರಿಂದ ೯ನೇ ತರಗತಿಗಳಿಗೆ ೨೦೨೦ರ ಆಗಸ್ಟ್ ೪ರಿಂದ ಅಕ್ಟೋಬರ್ ೧೦ರವರೆಗೆ ವಿದ್ಯಾಗಮ ತರಗತಿಗಳು ನಡೆದಿವೆ. ೨೦೨೧ ಜನವರಿ ೨೯ರಿಂದ ಫೆಬ್ರವರಿ ೧ರವರೆಗೆ ೯ ಮತ್ತು ೧೦ನೇ ತರಗತಿಗಳು ಪೂರ್ಣವಾಗಿ ನಡೆದಿವೆ. ಫೆ. ೨೨ರಿಂದ ಬೆಂಗಳೂರು ನಗರ ಮತ್ತು ಕೇರಳ ಗಡಿ ಭಾಗದ ಪ್ರದೇಶಗಳ ಶಾಲೆಗಳಲ್ಲಿ ವಿದ್ಯಾಗಮ ತರಗತಿಗಳು ನಡೆದಿವೆ. ಉಳಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿ ಈ ಅವಧಿಯಲ್ಲಿ ಪೂರ್ಣಾವಧಿ ಭೌತಿಕ ತರಗತಿಗಳು ನಡೆದಿವೆ. ಆನ್‌ಲೈನ್ ಸೇರಿದಂತೆ ವಿವಿಧ ಪ್ರಕಾರದ ತರಗತಿಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ೬ರಿಂದ ೯ನೇ ತರಗತಿಗಳ ಮೌಲ್ಯಾಂಕನ ವಿಶ್ಲೇಷಣೆ ಹಾಗೂ ಫಲಿತಾಂಶ ಪ್ರಕಟಣೆ ಮಾಡಲಾಗತ್ತದೆ.

ಈ ತರಗತಿಗಳ ವಿದ್ಯಾರ್ಥಿಗಳಿಗೆ ಈವರೆವಿಗೂ ಪೂರೈಸಿದ ಚಟುವಟಿಕೆಗಳನ್ನು ಆಧರಿಸಿ ಮಾತ್ರ ಮೌಲ್ಯಂಕನ ಮಾಡಲು ತಿಳಿಸಿರುವುದರಿಂದ ಈ ಮಕ್ಕಳಿಗೆ ಪ್ರತ್ಯೇಕ ಆನ್‌ಲೈನ್, ಆಫ್‌ಲೈನ್ ಮೂಲಕ ಮೌಲ್ಯಾಂಕನ ಮಾಡಬಾರದು ಎಂದು ಸಚಿವರು ತಿಳಿಸಿದ್ದಾರೆ.

ಬೇಸಿಗೆ ರಜೆ ಮತ್ತು ಮುಂದಿನ ಶೈಕ್ಷಣಿಕ ವರ್ಷಾರಂಭ..!

ಒಂದರಿಂದ ಏಳು, ಎಂಟನೇ ತರಗತಿಗಳು ಇರುವ ಪ್ರಾಥಮಿಕ ಶಾಲೆಗಳಿಗೆ ಮೇ ೧ರಿಂದ ಜೂನ್ ೧೪ರವರಗೆ ಬೇಸಿಗೆ ರಜೆ. ಜೂ. ೧೫ರಿಂದ ೨೦೨೧-೨೨ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ ಮತ್ತು ಪ್ರೌಢಶಾಲೆಗಳಿಗೆ ಅಂದರೆ ೮ ಮತ್ತು ೯ನೇ ತರಗತಿಗಳಲ್ಲಿನ ವಿದ್ಯಾರ್ಥಿಗಳಿಗೆ ಮೇ ೧ರಿಂದ ಜುಲೈ ೧೪ರವರೆಗೆ ಬೇಸಿಗೆ ರಜೆ. ಪ್ರೌಢಶಾಲೆಗಳ ಶಿಕ್ಷಕರಿಗೆ ಜೂ. ೧೫ರಿಂದ ಜುಲೈ ೧೪ರವರೆಗೆ ಬೇಸಿಗೆ ರಜೆ. ಜೂ. ೨೧ರಿಂದ ಜು. ೫ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆಯುತ್ತವೆ. ಜು. ೧೫ರಿಂದ ೨೦೨೧-೨೨ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ.

ಅಲ್ಲದೆ, ಈ ವೇಳಾಪಟ್ಟಿ ತಾತ್ಕಾಲಿಕವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ, ಇಲಾಖೆ ಮತ್ತು ಜಿಲ್ಲಾಡಳಿತಗಳು ನೀಡುವ ಸೂಚನೆ ಮತ್ತು ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.