1.55 ಲಕ್ಷ ರೂ.ಮೌಲ್ಯದ ಮದ್ಯ ಜಪ್ತಿ

ಬೀದರ್,ಏ.6-ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಉಪ ಆಯುಕ್ತರಾದ ಇಸ್ಮಾಯಿಲ್ ಇನಾಂದಾರ ಅವರ ನಿರ್ದೇಶನ ಹಾಗೂ ಬೀದರ್ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಆನಂದ ಉಕ್ಕಲಿ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಅಧಿಕಾರಿಗಳು ಬಸವಕಲ್ಯಾಣ ಹಾಗೂ ಭಾಲ್ಕಿ ಪಟ್ಟಣಗಳಲ್ಲಿ ದಾಳಿ ನಡೆಸಿ 1.55 ಲಕ್ಷ ರೂ.ಮೌಲ್ಯದ ಮದ್ಯ ಮತ್ತು ವಾಹನ ಜಪ್ತಿ ಮಾಡಿದ್ದಾರೆ.
ಹುಲಸೂರ ತಾಲ್ಲೂಕಿನ ಮುಚಳಂಬ ಗ್ರಾಮದ ಹೊರವಲಯದ ಭಾರತ ಪೆಟ್ರೋಲ್ ಪಂಪ್ ಹತ್ತಿರ ದ್ವಿಚಕ್ರ ವಾಹನದ ಮೇಲೆ ಸಾಗಿಸುತ್ತಿದ್ದ 97, 536 ರೂ. ಮೌಲ್ಯದ 17.280 ಲೀಟರ್ ಮದ್ಯ ಜಪ್ತಿ ಮಾಡಿ ಗೋರ್ಟಾ (ಬಿ) ಗ್ರಾಮದ ಸಂಜೀವಕುಮಾರ ತೆಲಂಗ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಔರಾದ್ ಪಟ್ಟಣದಿಂದ ಚಿಂತಕಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ದಾಳಿ ಮಾಡಿ ದ್ವಿಚಕ್ರ ವಾಹನದ ಮೇಲೆ ಸಾಗಿಸುತ್ತಿದ್ದ 56,720 ರೂ.ಮೌಲ್ಯದ 17.280 ಲೀಟರ್ ಮದ್ಯ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಿ ಪ್ರಶಾಂತ ಎರನಾಳೆ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮುಚಳಂಬ ಗ್ರಾಮದ ಹೊರವಲಯದಲ್ಲಿ ನಡೆಸಿದ ದಾಳಿಯಲ್ಲಿ ಅಬಕಾರಿ ಪೇದೆಗಳಾದ ವಿಶ್ವನಾಥ ಸ್ವಾಮಿ, ಮಹಮ್ಮದ್ ಮತೀನ್ ಮತ್ತು ವಾಹನ ಚಾಲಕ ರಾಜಕುಮಾರ, ಚಿಂತಕಿ ಗ್ರಾಮದ ರಸ್ತೆಯಲ್ಲಿ ನಡೆಸಿದ ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಕುಮಾರಿ ಪ್ರೀತಿ ರಾಠೋಡ್, ಅಬಕಾರಿ ಪೇದೆಗಳಾದ ಮಹಮ್ಮದ್ ಪಟೇಲ್, ಕ್ಷೇಮಲಿಂಗ, ವಾಹನ ಚಾಲಕ ಧನರಾಜ ಭಾಗವಹಿಸಿದ್ದರು.
ಎರಡೂ ಪ್ರಕರಣಗಳಲ್ಲಿ ಒಟ್ಟು 1.55 ಲಕ್ಷ ರೂ. ಮೌಲ್ಯದ ಮದ್ಯ ಮತ್ತು ವಾಹನ ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತರಾದ ಮಹ್ಮದ್ ಇಸ್ಮಾಯಿಲ್ ಇನಾಂದಾರ ತಿಳಿಸಿದ್ದಾರೆ.