1.5 ಕೋಟಿ ವೆಚ್ಚದಲ್ಲಿ ಎರಡು ಕಡೆ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ನಿರ್ಬಂಧ ಹೇರಿದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

ಯಾದಗಿರಿ, ಮಾ. 15: ತಾಲ್ಲೂಕಿನ ಮುದ್ನಾಳ ಗ್ರಾಮದ ಹಿಂಭಾಗದಲ್ಲಿರುವ ತಿಮ್ಮಪ್ಪ ದೇವಸ್ಥಾನದಿಂದ ನೂತನ ಮೆಡಿಕಲ್ ಕಾಲೇಜಿಗೆ ಹೋಗುವ ಸಣ್ಣ ತಾಂಡಾ ಹತ್ತಿರದ ರಸ್ತೆ ಹಾಗೂ ತುಮಕೂರು ಸೀಮೆ ಹಾಗೂ ರೈಲ್ವೆ ಮೇಲ್ಸೆತುವೆ ಹಾದು ಹೋಗುವ ರಸ್ತೆಯಲ್ಲಿ ಸೇರಿದಂತೆ 4 ಕಡೆ ಎರಡು ಬದಿಯಲ್ಲಿ ಸುಮಾರು 12 ಕಂಬಗಳು ಅಳವಡಿಸಿ ಸಂಚಾರಕ್ಕೆ ಅಡ್ಡಿಯಾಗುವಂತಹ ಕಂಬಗಳನ್ನು ಹಾಕಲಾಗಿದ್ದು ಇವನ್ನು 24 ತಾಸುಗಳಲ್ಲಿ ತೆರವು ಮಾಡಬೇಕೆಂದು ಸಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ.

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ನಂತರ ಹೇಳಿಕೆ ನೀಡಿರುವ ಅವರು, ಸದರಿ ರಸ್ತೆಗಳಲ್ಲಿ 9 ಅಡಿ ಅಂತರದಲ್ಲಿ ರಸ್ತೆಯ ತಲೆ ಭಾಗದಲ್ಲಿ ಅಂದರೆ ಮೇಲ್ಬಾಗದಲ್ಲಿ ಅಡ್ಡಲಾಗಿ ಕಬ್ಬಿಣದ ಸರಳು ಅಳವಡಿಸಿರುತ್ತಾರೆ. ಅಂದಾಜು ಪತ್ರಿಕೆಯಲ್ಲಿ ಇಲ್ಲದೇ ಇರುವ ಈ ಸರಗಳುಗಳು ಅಳವಡಿಸಿರುವುದು ಅಕ್ರಮವಾಗಿದೆ.

ಸಮೀಪದಲ್ಲಿಯೇ ಅಬ್ಬೆತುಮಕೂರು ಗೆ ಜಾತ್ರೆಗೆ ಹಾಗೂ ಮುಂದಿನ ವಾರ ಜರುಗುವ ಅತಿರುದ್ರ ಯಾಗಕ್ಕೆ ತೆರಳುವ ಲಕ್ಷಾಂತರ ಜನತೆ ಹೊರ ಜಿಲ್ಲೆ ಹೊರ ರಾಜ್ಯದಿಂದ ಹಾಗೂ ಮುದ್ನಾಳದ ಜಾತ್ರೆಗೆ ಜನ ವಿವಿಧ ವಾಹನಗಳಲ್ಲಿ ಕೆಳಗೆ ಮೇಲೆ ಕುಳಿತು ಸಂಚರಿಸುತ್ತಾರೆ. ಅಲ್ಲದೇ ರೈತರು ಹೊಲಕ್ಕೆ ಹೋಗುವುದು ಮತ್ತು ತೊಗರಿ ಕಟ್ಟಿಗೆ, ಜೋಳದ ಸೊಪ್ಪೆ, ಕವಳೆ ಹುಲ್ಲು ಶೇಂಗಿನ ಹೊಟ್ಟು ಮುಂತಾದವನ್ನು ಟ್ರ್ಯಾಕ್ಟರ್ ಮತ್ತು ಎತ್ತಿನ ಗಾಡಿಗಳಲ್ಲಿ ಎತ್ತರವಾಗಿ ಹೊಟ್ಟಿಕೊಂಡು ಬರುತ್ತಾರೆ. ಇಂತಹ ಸಂದರ್ಭಧಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಣವಾಗಿರುವ ಎರಡು ರಸ್ತೆಗಳಲ್ಲಿ ಇಂತಹ ನಿರ್ಬಂಧ ಹೇರಿದವರ ವಿರುದ್ಧ ಕ್ರಮ ಜರುಗಿಸಬೇಕು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದನ್ನು ತೆರವು ಮಾಡಲು ಕ್ರಮ ಕೈಗೊಳ್ಳಬೇಕು.

ರಾತ್ರಿವೇಳೆ ಈ ರಸ್ತೆಯಲ್ಲಿ ಹೊಸಬರು ಬಂದರೆ ಅಪಘಾತ ಕಟ್ಟಿಟ್ಟ ಬುತ್ತಿಯಾಗಿದೆ ಆಗ ಇದಕ್ಕೆ ಯಾರು ಹೊಣೆಗಾರರು? ಎಂದು ಅವರು ಪ್ರಶ್ನಿಸಿದ್ದಾರೆ.

ಕೂಡಲೇ ಕ್ರಮ ಕೈಗೊಂಡು 24 ತಾಸುಗಳಲ್ಲಿ ಅವುಗಳನ್ನು ತೆರವು ಮಾಡಬೇಕು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಮುಂದಾಗುವ ಅನಾಹುತ ತಪ್ಪಿಸಬೇಕು ಯಾರಿಗಾದರೂ ಅನಾಹುತವಾದಲ್ಲಿ 5 ಕೋಟಿ. ರೂ. ಪರಿಹಾರವನ್ನು ಗುತ್ತಿಗೆದಾರರು ಮತ್ತು ಜೆಇಗಳು ಕೊಡಬೇಕು ಎಂದು ಒತ್ತಾಯಿಸಿದ್ದಾರೆ.