1.25 ಲಕ್ಷ ದಾಟಿದ ಸೋಂಕು: ನಿದ್ದೆಗೆಟ್ಟ ಸರ್ಕಾರ

ನವದೆಹಲಿ, ಏ. ೮- ದೇಶದಲ್ಲಿ ೨ನೇ ಹಂತದ ಕೊರೊನಾ ಸೋಂಕಿನ ಅಲೆ ರುದ್ರತಾಂಡವವಾಡುತ್ತಿದೆ. ದಿನದಿಂದ ದಿನಕ್ಕೆ ದಾಖಲೆ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುತ್ತಿರುವುದು ದೇಶದ ಜನರನ್ನು ಬೆಚ್ಚಿಬೀಳಿಸಿದೆ.
ದೇಶದಲ್ಲಿ ಸೋಂಕು ಕಾಣಿಸಿಕೊಂಡ ಇದೇ ಮೊದಲ ಬಾರಿಗೆ ೧,೨೬,೭೮೯ ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ದಾಖಲೆ ಬರೆದಿದೆ. ಈ ಮೂಲಕ ಈ ವರ್ಷದಲ್ಲಿ ೩ನೇ ಬಾರಿಗೆ ಸೋಂಕು ೧ ಲಕ್ಷ ಗಡಿದಾಟಿದೆ.
ಕಳೆದ ೨೪ ಗಂಟೆಗಳಲ್ಲಿ ೧,೨೬,೭೮೯ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಒಟ್ಟಾರೆ ಸೋಂಕಿನ ಸಂಖ್ಯೆ ೧,೨೯,೨೮,೫೭೪ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇಂದು ಬೆಳಿಗ್ಗೆ ೮ ಗಂಟೆಯ ತನಕ ೬೮೫ ಮಂದಿ ಮೃತಪಟ್ಟಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆ ೧,೬೬,೮೬೨ ಮಂದಿಗೆ ಏರಿಕೆಯಾಗಿದೆ. ಇಂದು ೫೯,೨೫೮ ಮಂದಿ ಆಸ್ಪತ್ರೆಯಿಂದ ಗುಣಮುಕ್ತರಾಗಿದ್ದು, ಈವರೆಗೆ ಚೇತರಿಸಿಕೊಂಡವರ ಸಂಖ್ಯೆ ೧,೧೮,೫೧,೩೯೩ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಚಂಡಿಘಡ, ಛತ್ತೀಸ್ ಗಡ, ಪಂಜಾಬ್, ದೆಹಲಿ ಸೇರಿದಂತೆ, ವಿವಿಧ ರಾಜ್ಯಗಳಲ್ಲಿ ಸೋಂಕಿನ ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವುದು ದೇಶದಲ್ಲಿ ಸೋಂಕು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.
ಏ. ೫ ರಂದು ಮೊದಲ ಬಾರಿಗೆ ೧,೦೩,೫೫೮ ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಅದಾದ ಬಳಿಕ ನಿನ್ನೆ ೧,೧೫,೭೩೬ ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಇಂದು ೧,೨೬,೭೮೯ ಮಂದಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
೯ ಲಕ್ಷ ಗಡಿದಾಟಿದ ಸಕ್ರಿಯ ಪ್ರಕರಣ
ದೇಶದಲ್ಲಿ ಕೊರೊನಾ ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ದೇಶದಲ್ಲಿ ನಿನ್ನೆ ಒಂದೇ ದಿನ ೬೬,೮೪೬ ಮಂದಿಗೆ ಸಕ್ರಿಯ ಪ್ರಕರಣಗಳು ಕಾಣಿಸಿಕೊಂಡಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ ೯,೧೦,೩೧೯ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸೋಂಕಿನ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. ೬.೫೯ ರಷ್ಟು ಇದೆ.

ಚೇತರಿಕೆ ಇಳಿಕೆ
ದೇಶದಲ್ಲಿ ಕೊರೊನಾ ಸೋಂಕು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚೇತರಿಕೆ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಸದ್ಯ ಶೇ. ೯೨,೧೧ ರಷ್ಟು ಸಕ್ರಿಯ ಪ್ರಕರಣಗಳಿವೆ.
ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಶೇ. ೧.೩೦ ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

೯ ಕೋಟಿಗೂ ಅಧಿಕ ಲಸಿಕೆ
ದೇಶದಲ್ಲಿ ನಿತ್ಯ ಕೋವಿಡ್ – ೧೯ ಸೋಂಕು ಹೆಚ್ಚುತ್ತಿರುವ ನಡುವೆಯೇ ಲಸಿಕೆ ಹಾಕುವ ಕಾರ್ಯವೂ ಹೆಚ್ಚಾಗಿದೆ. ದೇಶದಲ್ಲಿ ಇದುವರೆಗೂ ೯,೦೧,೯೮,೬೭೩ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಸಚಿವಾಲಯ ತಿಳಿಸಿದೆ.