1 ಲಕ್ಷ 40 ಸಾವಿರ ಲಂಚ‌ ಎಸಿಬಿ ಬಲೆಗೆ ಸಹಾಯಕ ನಿರ್ದೇಶಕ

ಬೆಂಗಳೂರು, ಆ.4-ಚಿತ್ರದುರ್ಗ ಜಿಲ್ಲೆಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಡಿ ತೋಟಯ್ಯ ಕೃಷಿ ಹೊಂಡ ನಿರ್ಮಾಣಕ್ಕೆ 2 ಲಕ್ಷ 80 ಸಾವಿರ ರೂ. ಸಹಾಯಧನ ನೀಡಲು 1 ಲಕ್ಷ 40 ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸರ್ಕಾರದ ಸಹಾಯಧನದಲ್ಲಿ ಶೇಕಡಾ 50ರಷ್ಟು ಲಂಚವನ್ನು ಅರಬಗಟ್ಟ ಗ್ರಾಮದ ರೈತ ಕೃಷ್ಣ ನಾಯ್ಕ್ರಿಂದ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಎಸಿಬಿ ಡಿವೈಎಸ್ಪಿ ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಆರ್ ಐ ಬಲೆಗೆ
ಆಸ್ತಿ ಖಾತೆ ವರ್ಗಾವಣೆಗೆ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು ಮೈಸೂರಿನ ರೆವಿನ್ಯೂ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ.
ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 8 ರ ಪ್ರಭಾರ ರೆವಿನ್ಯೂ ಇನ್ಸ್‌ಪೆಕ್ಟರ್ ಸಿದ್ದರಾಜು, ಗಾಯಿತ್ರಿ ಪುರಂನ ನಿವಾಸಿಯ ಖಾತೆ ವರ್ಗಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 15 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮೈಸೂರು ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.