1 ರಿಂದ 8 ತರಗತಿ ಆರಂಭ ನಾಳೆ ನಿರ್ಧಾರ

ಬೆಂಗಳೂರು,ಆ.೨೯-ರಾಜ್ಯದಲ್ಲಿ ೧ ರಿಂದ ೮ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವ ಸಂಬಂಧ ಸರ್ಕಾರ ನಾಳೆ ತೀರ್ಮಾನ ಪ್ರಕಟಿಸಲಿದೆ.
ನಾಳಿನ ಸಭೆಯಲ್ಲಿ ಶಾಲೆ ಆರಂಭ ಮತ್ತು ಗಣೇಶೋತ್ಸವ ಆಚರಣೆಯ ಸಂಬಂಧ ಸರ್ಕಾರದ ತೀರ್ಮಾನ ಏನಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ ಸಂಭಾವ್ಯ ಕೋವಿಡ್ ೩ನೇ ಅಲೆಯನ್ನು ತಡೆಯಲು ಕೈಗೊಳ್ಳಬೇಕಾಗಿರುವ ಬಿಗಿ ಕ್ರಮಗಳ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ತಜ್ಞರು ಹಾಗೂ ಸಚಿವರುಗಳ ಜತೆ ಸಭೆ ನಡೆಸಲಿದ್ದಾರೆ.
ನಾಳೆ ಸಂಜೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುವ ಈ ಸಭೆಯಲ್ಲಿ ೧ ರಿಂದ ೮ನೇ ತರಗತಿಗಳನ್ನು ಯಾವಾಗ ಆರಂಭಿಸಬೇಕು ಎಂಬ ನಿರ್ಧಾರವು ಆಗಲಿದೆ.
ರಾಜ್ಯದಲ್ಲಿ ಈಗಾಗಲೇ ಆ. ೨೩ ರಿಂದ ೯, ೧೦ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿದ್ದು, ೧ ರಿಂದ ೮ನೇ ತರಗತಿಗಳನ್ನು ಆರಂಭಿಸಬೇಕು ಎಂಬ ತಜ್ಞರ ಸಲಹೆ ಹಿನ್ನೆಲೆಯಲ್ಲಿ ೧ ರಿಂದ ೮ನೇ ತರಗತಿಗಳನ್ನು ಸದ್ಯಕ್ಕೆ ಆರಂಭಿಸಬೇಕೇ ಬೇಡವೇ ಎಂಬ ಬಗ್ಗೆ ಮುಖ್ಯಮಂತ್ರಿಗಳು ಎಲ್ಲರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವರು.
ಒಂದು ವೇಳೆ ಶಾಲೆಗಳನ್ನು ಆರಂಭಿಸುವ ತೀರ್ಮಾನವಾದರೆ ೧ ರಿಂದ ೮ನೇ ತರಗತಿಗಳ ಆರಂಭದ ದಿನಾಂಕವು ನಾಳೆಯೇ ನಿಗದಿಯಾಗುವ ಸಾಧ್ಯತೆ ಇದೆ.
ಗಣೇಶೋತ್ಸವ ತೀರ್ಮಾನ
ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವ ಬಗ್ಗೆಯೂ ನಾಳೆ ನಡೆಯುವ ತಜ್ಞರ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂಬ ಒತ್ತಡಗಳು ಹೆಚ್ಚಿದ್ದು, ಅದರಲ್ಲೂ ಆಡಳಿತಾರೂಢ ಬಿಜೆಪಿ ಹಲವು ಶಾಸಕರು ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಪಡೆದು ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ತೀರ್ಮಾನವನ್ನು ನಾಳಿನ ಸಭೆಯಲ್ಲಿ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಹೇಳಿದ್ದಾರೆ.
ಬಿಗಿಕ್ರಮಗಳ ತೀರ್ಮಾನ
ರಾಜ್ಯದಲ್ಲಿ ಸಂಭಾವ್ಯ ಕೊರೊನಾ ೩ನೇ ಅಲೆಯನ್ನು ತಡೆಯಲು ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಜಾರಿಗೊಳಿಸಿದ್ದು, ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಕೇರಳದಿಂದ ರಾಜ್ಯ ಪ್ರವೇಶಿಸುವವರಿಗೆ ೭ ದಿನಗಳ ಕ್ವಾರಂಟೈನ್ ನಿಯಮವನ್ನು ಜಾರಿ ಮಾಡುವ ಬಗ್ಗೆಯೂ ತೀರ್ಮಾನಗಳು ಆಗುವ ಸಾಧ್ಯತೆಗಳಿವೆ.
ಕೇರಳ ಮತ್ತು ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಕೈಗೊಳ್ಳಬೇಕಾದ ಮತ್ತಷ್ಟು ಬಿಗಿ ಕ್ರಮಗಳ ಬಗ್ಗೆಯೂ ನಾಳಿನ ಸಭೆಯಲ್ಲಿ ಚರ್ಚೆಗಳು ಆಗಲಿವೆ.