1 ರಂದು ಪ್ರತ್ಯೇಕ ರಾಜ್ಯ ಧ್ವಜಾರೋಹಣ ನಿರ್ಧಾರ

ಕಲಬುರಗಿ,ಅ 27: ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ನಿರ್ಲಕ್ಷ್ಯ ಹಾಗೂ ಕಲಂ 371 ಜೆ ಸಮರ್ಪಕ ಜಾರಿಗೊಳಿಸದಿರುವುದನ್ನು ಖಂಡಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ನ.1ರಂದು ಕಲಬುರಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬೆಳಿಗ್ಗೆ 7.30 ಕ್ಕೆ
ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನಿರ್ಧರಿಸಿದೆ.
ವಿಮಾನ ನಿಲ್ದಾಣ, ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಶೈಕ್ಷಣಿಕವಾಗಿ ಸಮಗ್ರ ಅಭಿವೃದ್ಧಿ ಹೊಂದಿದೆ.ಆದ್ದರಿಂದ ಕಲಬುರಗಿ ಜಿಲ್ಲೆ ರಾಜ್ಯದ ಉಪರಾಜಧಾನಿ ಎಂದು ಒಂದು ತಿಂಗಳೊಳಗಾಗಿ ಘೋಷಿಸಬೇಕು. ಇಲ್ಲದಿದ್ದರೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿ ಎಂದು ನ.1ರಂದು ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಿ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಪ್ರಾರಂಭಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂಎಸ್ ಪಾಟೀಲ ನರಿಬೋಳ ತಿಳಿಸಿದ್ದಾರೆ.
ಕಲಬುರಗಿ ಜನರು ತಮ್ಮ ಕೆಲಸಕ್ಕಾಗಿ 600 ಕಿ.ಮೀ ದೂರದ ರಾಜಧಾನಿ ಬೆಂಗಳೂರಿಗೆ ಹೋಗಿ ಬರುವುದು ದುಬಾರಿ ಜೊತೆಗೆ ಸಮಯವು ವ್ಯರ್ಥವಾಗುತ್ತದೆ. ಹೀಗಾಗಿ ಕಲಬುರಗಿ ಉಪರಾಜಧಾನಿ ಆದರೆ ಎಲ್ಲಾ ಉಪಕಚೇರಿ ಇಲ್ಲಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಇಲ್ಲಿನ ಜನರಿಗೆ ಅನುಕೂಲವಾಗುತ್ತದೆ.ಈ ಹಿಂದೆ ಸರ್ಕಾರ 371 (ಜೆ) ಸಮರ್ಪಕ ಅನುಷ್ಠಾನಕ್ಕೆ ವಿಶೇಷ ಅಭಿವೃದ್ಧಿ ಕೋಶ ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಇನ್ನೂ ಅದು ಕೇವಲ ಭರವಸೆಯಾಗಿಯೇ ಉಳಿದಿದೆ. ರೈಲ್ವೆ ಡಿವಿಷನ್, ಏಮ್ಸ್, ಟೆಕ್ಸ್‍ಟೈಲ್ ಪಾರ್ಕ್, ಆಹಾರ ಪ್ರಯೋಗಾಲಯ ಹಾಗೂ ಇಂಧನ ಪ್ರಾದೇಶಿಕ ಕಚೇರಿ ಹೋಗಿವೆ. ಇದೀಗ ದಶಕಗಳ ಕಾಲ ಇತಿಹಾಸ ಹೊಂದಿರುವ ದೂರದರ್ಶನ ಕೇಂದ್ರವನ್ನೂ ಕೂಡಾ ಕಲಬುರಗಿಯಿಂದ ಕಿತ್ತುಕೊಳ್ಳಲಾಗುತ್ತಿದೆ.ಅಲ್ಲದೆ 371 ಜೆ ಪ್ರಕಾರ ಕ.ಕ ಪ್ರದೇಶದ ಅಧಿಕಾರಿಗಳಿಗೆ ಸೂಕ್ತ ಸ್ಥಾನ ಮಾನ ಕೊಡುವುದರಲ್ಲಿ ಎಲ್ಲ ಸರ್ಕಾರಗಳು ಮಲತಾಯಿ ಧೋರಣೆ ತೋರುತ್ತಿವೆ ಸಚಿವ ಸಂಪುಟ ಶೇ 25 ನಿಗಮ ಮಂಡಳಿಗಳಲ್ಲಿ ಶೇ 25 ಮೀಸಲಾತಿ ಮರೀಚಿಕೆಯಾಗಿದೆ ಎಂದಿದ್ದಾರೆ.