1 ಕೋ.ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ

ಹುಬ್ಬಳ್ಳಿ, ಏ28: ದೊಡ್ಡಕೇರಿ ಓಣಿಯ ಅತ್ಯಂತ ಪುರಾತನವಾದ ಶ್ರೀ ರೇವಣಸಿದ್ದೇಶ್ವರ ಮಠದ ಸಮುದಾಯ ಭವನ ನಿರ್ಮಾಣಕ್ಕೆ 2 ಕೋ.ರೂ. ಮೀಸಲಿಟ್ಟಿದ್ದು, ಸರ್ಕಾರದಿಂದ ಅನುಮೋದನೆ ದೊರೆತ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ತಿಳಿಸಿದರು.
ಇಲ್ಲಿನ ವಾರ್ಡ ನಂ. 67ರ ಸೆಟ್ಲಮೆಂಟ್ ದೊಡ್ಡಕೇರಿ ಓಣಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1 ಕೋ.ರೂ. ಅನುದಾನದಲ್ಲಿ ಕೈಗೊಂಡಿರುವ ಒಳರಸ್ತೆಗಳ ಕಾಂಕ್ರೀಟಿಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶ್ರೀ ರೇವಣಸಿದ್ದೇಶ್ವರ ಮಠದ ಸಮುದಾಯ ಭವನ ನಿರ್ಮಾಣವು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಅದಕ್ಕಾಗಿ 2 ಕೋ.ರೂ. ಅನುದಾನವನ್ನು ಪ್ರತ್ಯೇಕವಾಗಿ ಮೀಸಲಿರಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಸೆಟ್ಲಮೆಂಟ್‍ನ ಯಂಗ್ ಸ್ಟಾರ್ಸ್ ಸ್ಪೋಟ್ರ್ಸ ಕ್ಲಬ್ ಮೈದಾನದ ಬಳಿ ಈಗಾಗಲೇ 5 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಭವನ ನಿರ್ಮಾಣವಾಗುತ್ತಿದೆ. ಅಲ್ಲದೇ, 50 ಲಕ್ಷ ರೂ. ವೆಚ್ಚದಲ್ಲಿ ಹೊಸ ಸಮುದಾಯ ಭವನ ಸಹ ನಿರ್ಮಿಸಿ ಈ ಭಾಗದ ಬಡ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಕಡು ಬಡವರೇ ಅತಿ ಹೆಚ್ಚು ವಾಸಿಸುವ ಸೆಟ್ಲಮೆಂಟ್ ಭಾಗದಲ್ಲಿ ಈಗಾಗಲೇ ಸಿಸಿ ರಸ್ತೆ, ಗಟಾರ, ಯುಜಿಡಿ, ಬೀದಿದೀಪ, ಕುಡಿಯುವ ನೀರಿನ ಸೌಲಭ್ಯ, ಭವನ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದು, ಇದೀಗ 1 ಕೋ.ರೂ. ವೆಚ್ಚದಲ್ಲಿ ದೊಡ್ಡಕೇರಿ ಓಣಿಯ ಎಲ್ಲ ಒಳರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಿ ಎಕ್ಸಟೆಂಶನ್ ಮಾದರಿಯಲ್ಲಿ ಸುಂದರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮೀಬಾಯಿ ಯಮನೂರು ಜಾಧವ, ಯಮನೂರು ಗುಡಿಹಾಳ, ವಿಜನಗೌಡ ಪಾಟೀಲ, ಮುಖಂಡರಾದ ನಿಂಗಪ್ಪ ಮೊರಬದ, ವೆಂಕಟೇಶ ಮೊರಬದ, ಶ್ರೀನಿವಾಸ ಬೆಳದಡಿ, ಪರಶುರಾಮ ಹೊಸಮನಿ, ಕುಮಾರ ಕುಂದನಹಳ್ಳಿ, ಗುಡ್ಡಪ್ಪ, ಶರೀಫ್ ಅದವಾನಿ, ಅಜರ್ ಮನಿಯಾರ, ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು, ಇತರರು ಇದ್ದರು.