1ಸಾವಿರ ಯಶಸ್ವಿನಿ ಕಾರ್ಡ್ ವಿತರಣೆ ಗುರಿ: ರವಿಕುಮಾರ್

ಬೆಂಗಳೂರು : ಮುಂದಿನ ದಿನಗಳಲ್ಲಿ ಸೊಸೈಟಿವತಿಯಿಂದ ೧ಸಾವಿರ ಆರೋಗ್ಯ ವಿಮೆ ಕಾರ್ಡ್ ವಿರಿಸುವ ಗುರಿ ಹೊಂದಲಾಗಿದೆ ಎಂದು ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ರವಿಕುಮಾರ್ ತಿಳಿಸಿದರು.
ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ವತಿಯಿಂದ ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಯಶಸ್ವಿನಿ ಸ್ಮಾರ್ಟ್ ಕಾರ್ಡ್ ವಿತರಿಸಿ ಮಾತನಾಡಿದರು.
ಇಂದು ೭೧ ಜನ ಅರ್ಹ ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಿಸಲಾಗಿದೆ. ಇದರಿಂದ ಆಸ್ಪತದರೆ ಚಿಕಿತ್ಸಾ ವೆಚ್ಚದಲ್ಲಿ ೫ ಲಕ್ಷದವರೆಗೆ ಸಿಗಲಿದೆ. ಒಂದು ಕುಟುಂಬದ ಎಲ್ಲಾ ಸದಸ್ಯರಿಗೆ ನಗರದ ಪ್ರತಿಷ್ಠಿತ ೪೩ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಲಭ್ಯವಾಗಲಿದೆ. ಇದು ಆರಂಭಿಕ ಹಂತವಾಗಿದ್ದು, ಮುಂದಿನ ದಿನಗಳಲ್ಲಿ ಸೊಸೈಟಿಯ ೧ ಸಾವಿರಕ್ಕೂ ಹೆಚ್ಚಿನ ಖಾತೆದಾರ ಫಲಾನುಭವಿಗಳಿಗೆ ಯಶಸ್ವಿನಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದರು.
ಇತ್ತೀಚೆಗೆ ನಗರ ಪ್ರದೇಶದಲ್ಲಿ ಜೀವನ ನಿರ್ವಹಣೆ ದುಸ್ತರವಾಗಿದೆ. ಇಂದು ನಾವು ವಿತರಿಸಿರುವ ಯಶಸ್ವಿನಿ ಸ್ಮಾರ್ಟ್ ಕಾರ್ಡ್ ಆರೋಗ್ಯ ಸೇವೆಯ ನಿಟ್ಟಿನಲ್ಲಿ ವರದಾನವಾಗಿ ಪರಿಣಮಿಸಲಿದ್ದು, ಬಡವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಗತಿ ಪಥದತ್ತ ಸೊಸೈಟಿ:
ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ನಡುವಿನ ಸಮನ್ವಯತೆ ಕೊರತೆಯಿಂದ ಅದೆಷ್ಟೋ ಸಹಕಾರ ಸಂಘಗಳು ನಷ್ಟದ ಹಾದಿ ತುಳಿದು ಮುಚ್ಚಲ್ಪಟ್ಟಿವೆ. ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆರಂಭದಿಂದಲೂ ಆಡಳಿತ ಮಂಡಳಿ ಕಾರ್ಯನಿಷ್ಠೆ ಹೊಂದಿರುವ ಸಿಬ್ಬಂದಿಗಳ ಸೇವೆಯಿಂದಾಗಿ ಲಾಭ ಗಳಿಕೆಯ ಮೂಲಕ ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವುದು ಸಂತೋಷದ ಸಂಗತಿ. ಸಾಲ ಪಡೆದವರು ಸೂಕ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಅಗತ್ಯ ಸಹಕಾರ ನೀಡಿರುವ ಹಿನ್ನೆಲೆಯಲ್ಲಿ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರಗತಿ ಸಾಧಿಸಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸೊಸೈಟಿಯ ಉಪಾಧ್ತಕ್ಷ ವಿ.ನಾಗರಾಜಪ್ಪ, ಎಸ್ ಎಲ್ ಎನ್ ಧರ್ಮ ಸಂಸ್ಥೆಯ ಮಾಜಿ ಅಧ್ಯಕ್ಷ, ಸೊಸೈಟಿಯ ನಿರ್ದೇಶಕರಾದ ಬಿ.ಜಿ.ರಮೇಶ್, ವಿನೋದ್ ಕುಮಾರ್ ವ್ಯಾಸ್, ರತ್ನಮ್ಮ, ಸುಮಿತ್ರ, ಎಸ್ ಮಾರುತಿ, ಆಂಜಿನಪ್ಪ, ಇ.ಕೃಷ್ಣಪ್ಪ, ಚಂದ್ರು ಸೇರಿದಂತೆ ಸೊಸೈಟಿಯ ಸಿಬ್ಬಂದಿಗಳಿದ್ದರು.