1ರಿಂದ 8ನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಣೆ

ಕೊರಟಗೆರೆ, ಜು. ೨೯- ತಾಲ್ಲೂಕಿನ ಸೋಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೧ ರಿಂದ ೮ನೇ ತರಗತಿಯ ಮಕ್ಕಳಿಗೆ ಶಿಕ್ಷಣ ಇಲಾಖೆ ಆದೇಶಾನುಸಾರ ಬೇಯಿಸಿದ ಮೊಟ್ಟೆ ವಿತರಿಸಲಾಯಿತು.
ಮೊಟ್ಟೆ ವಿತರಿಸಿ ಮಾತನಾಡಿದ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕ ರಘು, ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ೪೬ ದಿನಗಳಿಗೆ ವಾರದಲ್ಲಿ ಎರಡು ದಿನ ಮಕ್ಕಳಿಗೆ ಬಿಸಿ ಊಟದ ಜತೆಗೆ ಮೊಟ್ಟೆ ಅಥವಾ ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ. ಆದೇಶದಂತೆ ಮಕ್ಕಳಿಗೆ ಬೇಯಿಸಿದ ಮೊಟ್ಟೆ ವಿತರಿಸಿದ್ದೇವೆ. ಮೊಟ್ಟೆ ತಿನ್ನದಂತಹ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಿತರಿಸಲಾಗಿದೆ ಎಂದರು.
ಶಾಲಾ ಹಂತದಲ್ಲಿಯೇ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪೋಷಕರು ಹಾಗೂ ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ಖರೀದಿ ಸಮಿತಿ ರಚಿಸಿಕೊಳ್ಳಲಾಗಿದೆ. ಯಾವುದೇ ಟೆಂಡರ್ ಇರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಸದಸ್ಯರು, ಮುಖ್ಯ ಶಿಕ್ಷಕಿಯರು ಹಾಗೂ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.