೯.೨೬ ಕೋಟಿ ರೈತರ ಖಾತೆಗೆ ಹಣ ವರ್ಗಾವಣೆ

ಸಂಜೆ ಮೋದಿ ಚಾಲನೆ

ನವದೆಹಲಿ,ಜೂ.೧೮- ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ಕಡತಕ್ಕೆ ಸಹಿ ಹಾಕಿದ್ದ ಪಿಎಂ-ಕಿಸಾನ್ ಸನ್ಮಾನ್ ನಿಧಿ ಅಡಿ ಸುಮಾರು ೯.೨೬ ಕೋಟಿ ಫಲಾನುಭವಿ ರೈತರಿಗೆ ೨೦,೦೦೦ ಕೋಟಿ ರೂ.ಗಿಂತ ಹೆಚ್ಚಿನ ಹಣ ವರ್ಗಾವಣೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಚಾಲನೆ ನೀಡಲಿದ್ದಾರೆ.ಉತ್ತರ ಪ್ರದೇಶದ ವಾರಣಸಿಯಲ್ಲಿ ಸಂಜೆ ೫ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ರೈತರ ಖಾತೆಗೆ ನೇರ ಹಣ ಜಮೆ ಮಾಡುವ ಯೋಜನೆಗೆ ಚಾಲನೆ ನೀಡಲಿದ್ದು ಏಕ ಕಾಲದಲ್ಲಿ ಎಲ್ಲಾ ರಾಜ್ಯಗಳಲ್ಲಿ ಕೇಂದ್ರ ಸಚಿವರು ಆಯಾ ರಾಜ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಅಧಿಕೃತ ಸರ್ಕಾರಿ ಕಾರ್ಯಕ್ರಮ ಇದಾಗಿದ್ದು ರೈತರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆ ಇದೆ ಎನ್ನುವುವನ್ನು ನಿರೂಪಿಸಿದ್ದಾರೆ.ಇಲ್ಲಿಯವರೆಗೆ, ೧೧ ಕೋಟಿಗೂ ಹೆಚ್ಚು ಅರ್ಹ ರೈತ ಕುಟುಂಬಗಳು ರೂ.ಗಿಂತ ಹೆಚ್ಚಿನ ಪ್ರಯೋಜನಗಳನ್ನು ಪಡೆದಿವೆ. ಪಿಎಂ-ಕಿಸಾನ್ ಅಡಿಯಲ್ಲಿ ೩.೦೪ ಲಕ್ಷ ಕೋಟಿ ರೈತರು ಲಾಭ ಪಡೆದಿದ್ದಾರೆ.ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸ್ವ-ಸಹಾಯ ಗುಂಪುಗಳ ಕೃಷಿ ಸಖಿಗಳ ೩೦,೦೦೦ ಕ್ಕೂ ಹೆಚ್ಚು ಮಹಿಳೆಯರಿಗೆ ಪ್ರಮಾಣಪತ್ರಗಳನ್ನು ನೀಡಲಿದ್ದಾರೆ. ಕೃಷಿ ಸಖಿ ಕನ್ವರ್ಜೆನ್ಸ್ ಪ್ರೋಗ್ರಾಂ ಗ್ರಾಮೀಣ ಮಹಿಳೆಯರನ್ನು ಕೃಷಿ ಸಖಿಯಾಗಿ ಸಬಲೀಕರಣಗೊಳಿಸುವ ಮೂಲಕ ಗ್ರಾಮೀಣ ಭಾರತವನ್ನು ಪರಿವರ್ತಿಸುವ ಗುರಿ ಹೊಂದಿದೆ.ಸಂಜೆ ಗಂಗಾರತಿ ಸಂಜೆ ೭ ಗಂಟೆಗೆ ಪ್ರಧಾನಿ ಮೋದಿ ಅವರು ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿಯನ್ನು ವೀಕ್ಷಿಸಲಿದ್ದಾರೆ ಮತ್ತು ನಂತರ ರಾತ್ರಿ ೮ ಗಂಟೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಮತ್ತು ದರ್ಶನವನ್ನು ಮಾಡಲಿದ್ದಾರೆ.

ಬಿಹಾರಕ್ಕೆ ನಾಳೆ ಭೇಟಿ

ಬಿಹಾರದಲ್ಲಿ ಬೆಳಗ್ಗೆ ೯.೪೫ರ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಳಂದದ ಅವಶೇಷಗಳಿಗೆ ಭೇಟಿ ನೀಡಲಿದ್ದಾರೆ. ನಳಂದದ ಅವಶೇಷಗಳನ್ನು ೨೦೧೬ ರಲ್ಲಿ ವಿಶ್ವ ಪಾರಂಪರಿಕ ತಾಣ ಎಂದು ಎಂದು ಘೋಷಿಸಲಾಗಿದೆ.ಬೆಳಗ್ಗೆ ೧೦.೩೦ರ ಸುಮಾರಿಗೆ ರಾಜ್‌ಗಿರ್‍ನಲ್ಲಿ ನಳಂದ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ವಿಶ್ವವಿದ್ಯಾನಿಲಯವನ್ನು ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆ ದೇಶಗಳ ನಡುವಿನ ಸಹಯೋಗವಾಗಿ ಕಲ್ಪಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ೧೭ ದೇಶಗಳ ಮಿಷನ್ ಮುಖ್ಯಸ್ಥರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.