೯ ವಿವಿ ಭವಿಷ್ಯ ಬರೆಯುವ ಕೇಂದ್ರಗಳು:ಬೊಮ್ಮಾಯಿ

ರಾಜ್ಯದ ೯ ನೂತನ ವಿವಿಗಳು ಮತ್ತು ಧಾರವಾಡದಲ್ಲಿ ನಿರ್ಮಿಸಿರುವ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ ಉದ್ಘಾಟಿಸಿದರು.

ಬೆಂಗಳೂರು,ಮಾ.೨೮:ರಾಜ್ಯದಲ್ಲಿ ಇಂದು ಆರಂಭವಾಗಿರುವ ಎಲ್ಲ ೯ ವಿಶ್ವವಿದ್ಯಾಲಯಗಳು ಮುಂದಿನ ಭವಿಷ್ಯ ಬರೆಯುವ ಕೇಂದ್ರಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿಂದು ೯ ನೂತನ ವಿಶ್ವವಿದ್ಯಾಲಯಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವಿಶ್ವವಿದ್ಯಾಲಯಗಳು ಮುಂದಿನ ಭವಿಷ್ಯ ಬರೆಯುವ ಕೇಂದ್ರಗಳಾಗಲಿವೆ ಎಂದರು.ರಾಜ್ಯ ಸರ್ಕಾರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದೆ. ರಾಜ್ಯದಲ್ಲಿ ಆರಂಭವಾಗಿರುವ ಈ ೯ ವಿಶ್ವವಿದ್ಯಾಲಯಗಳು ದೇಶದಲ್ಲೇ ಪ್ರಥಮ, ಮುಂದಿನ ದಿನಗಳಲ್ಲಿ ಬೇರೆ ರಾಜ್ಯಗಳು ಕರ್ನಾಟಕ ಮಾದರಿ ಅಳವಡಿಸಿಕೊಳ್ಳಬಹುದು ಎಂದರು.ರಾಜ್ಯದ ಮಕ್ಕಳಿಗೂ ಐಐಟಿ ಮಾದರಿ ಶಿಕ್ಷಣ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಕೆಐಟಿ ಸ್ಥಾಪನೆ ಮಾಡುತ್ತೇವೆ. ಮುಂದಿನ ೫ ವರ್ಷಗಳಲ್ಲಿ ಎಲ್ಲ ಸಂಸ್ಥೆಗಳು ಐಐಟಿ ಮಾದರಿ ಇರಲಿವೆ. ಐಐಟಿಯನ್ನು ಹುಡುಕಿಕೊಂಡು ಹೋಗುವ ಬದಲು ಇಲ್ಲಿಯೇ ಐಐಟಿ ಸೃಷ್ಟಿಸುತ್ತಿದ್ದೇವೆ ಎಂದರು.ಉನ್ನತ ಶಿಕ್ಷಣದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಜಗತ್ತಿನ ಉನ್ನತ ವಿಶ್ವವಿದ್ಯಾಲಯಗಳ ಜತೆ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಶಿಕ್ಷಣ ಸಂಸ್ಥೆ ಎಂದರೆ ಪಾವಿತ್ರ್ಯತೆ. ಸಂಸ್ಥೆಗಳು ಸರಸ್ವತಿ ವಾಹನ ಪರಮಹಂಸದಂತೆ ಪವಿತ್ರ, ವಿದ್ಯಾರ್ಥಿಗಳು ಕೂಡ ಅಷ್ಟೇ ಎತ್ತರಕ್ಕೆ ಬೆಳೆಯಬೇಕು ಎಂದರು.
ವಿದ್ಯಾರ್ಥಿಗಳು ನಾಡಿನ ಭವಿಷ್ಯ, ೨೧ನೇ ಶತಮಾನ ಜ್ಞಾನದ ಶತಮಾನ, ಮುಂದಿನ ದಿನಗಳಲ್ಲಿ ಭಾರತ ವಿಶ್ವಗುರು ಆಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಚಿವರುಗಳಾದ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಮುರುಗೇಶ್ ನಿರಾಣಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಶಿಕ್ಷಣ ಇಲಾಖೆ ಅಪರ ಮುಖ್ಯಕಾರ್ಯದರ್ಶಿ.ಎಸ್.ಆರ್. ಉಮಾಶಂಕರ್ ಉಪಸ್ಥಿತರಿದ್ದರು