
ನವದೆಹಲಿ,ಮಾ.೧೬- ದೇಶದಲ್ಲಿ ಇತ್ತೀಚೆಗೆ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ನಡುವೆ ದೇಶಾದ್ಯಂತ ಒಂಬತ್ತು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. ೧೦ ಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಉತ್ತರಾಖಂಡ್‌ನ ಪಿಥೋರಗಢ್ ಜಿಲ್ಲೆಯಲ್ಲಿ ಅತಿ ಹೆಚ್ಚು ಪಾಸಿಟಿವಿಟಿ ದರ ಅಂದರೆ ಶೇ.೨೫ ರಷ್ಟು ಇದೆ.ಉಳಿದಂತೆ ಮಿಜೋರಾಂನಲ್ಲಿ ಐಜ್ವಾಲ್ ಶೇ.೧೬.೬೭ ಶಿಮ್ಲಾ ಶೇ.೧೪.೨೯, ಮಂಡಿ ಶೇ.೧೩ ಹಿಮಾಚಲ ಪ್ರದೇಶದಲ್ಲಿ ಸೋಲನ್ ಜಿಲ್ಲೆಯಲ್ಲಿ ಶೇ. ೧೨.೫೦ ಮತ್ತು ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಶೇ. ೧೧ ೭೬ ರಷ್ಟು ಸಕ್ರಿಯ ಪ್ರಕರಣಗಳಿವೆ
ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡು, ಮಧ್ಯಪ್ರದೇಶ, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ದಂತಹ ರಾಜ್ಯಗಳಲ್ಲಿ ೧೫ ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ ೫ ರಿಂದ ಮತ್ತು ಶೇ. ೧೦ ರಷ್ಡು ಇದೆ ಎಂದು ಸಚಿವಾಲಯ ಹೇಳಿದೆ.
ದೆಹಲಿಯಲ್ಲಿ, ಪಾಸಿಟಿವಿಟಿ ದರ ಶೇ. ೩.೦೫ ರಷ್ಟಿದೆ, ಕಳೆದ ೨೪ ಗಂಟೆಗಳಲ್ಲಿ ೧,೩೭೯ ಮಾದರಿಗಳಲ್ಲಿ ೪೨ ಸೋಂಕಿತರನ್ನು ಪರೀಕ್ಷಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ. ೧ ರಷ್ಟು ಇದೆ.. “ಕಳೆದ ೨೪ ಗಂಟೆಗಳಲ್ಲಿ, ೯೫,೩೮೫ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರಲ್ಲಿ ೬೧೮ ಪಾಸಿಟಿವ್ ಬಂದಿವೆ” ಎಂದು ಮೂಲಗಳು ತಿಳಿಸಿವೆ.
ಕೊರೊನಾ ಸೋಂಕು ಪ್ರಕರಣ ಹಠಾತ್ ಉಲ್ಬಣದ ಹಿಂದೆ ಇರಬಹುದಾದ ಹೊಸ ರೂಪಾಂತರದ ತುರ್ತುಸ್ಥಿತಿಯ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ವಿಜ್ಞಾನಿ ಡಾ ಎನ್‌ಕೆ ಮೆಹ್ರಾ ಹೇಳಿದ್ದಾರೆ.