೮.೭ ಲಕ್ಷ ಮಂದಿಗೆ ಅಮೆರಿಕ ಪೌರತ್ವ

ವಾಷಿಂಗ್ಟನ್, ಫೆ.೧೨-ಪ್ರಸಕ್ತ ಹಣಕಾಸು ವರ್ಷದಲ್ಲಿ ೮.೭ ಲಕ್ಷ ಮಂದಿ ವಿದೇಶಿಯರು ಅಮೆರಿಕದ ಪೌರತ್ವ ಪಡೆದಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಂದು ಲಕ್ಷದಷ್ಟು ಕಡಿಮೆ ಆಗಿದೆ.ಒಟ್ಟು ೫೯,೧೦೦ ಮಂದಿ ಭಾರತೀಯರು (ಶೇಕಡ ೬.೭) ಅಮೆರಿಕದ ಪೌರತ್ವ ಪಡೆದಿದ್ದಾರೆ.
೧.೧ ಲಕ್ಷಕ್ಕೂ ಅಧಿಕ ಮಂದಿ ಮೆಕ್ಸಿಕನ್ನರು ಅಮೆರಿಕದ ಪೌರತ್ವ ಪಡೆದು ಅಗ್ರಸ್ಥಾನದಲ್ಲಿದ್ದಾರೆ.ಭಾರತ ಎರಡನೇ ಸ್ಥಾನದಲ್ಲಿದೆ.ಅಮೆರಿಕ ಪೌರತ್ವ ಪಡೆದವರಲ್ಲಿ ೪೪,೮೦೦ ಮಂದಿ ಫಿಲಿಪೀನ್ಸ್ ಮೂಲದವರು. ಅಗ್ರ ಐದು ದೇಶಗಳ ಪೈಕಿ ಡೊಮಿನಿಕನ್ ರಿಪಬ್ಲಿಕ್ ಮತ್ತು ಕ್ಯೂಬಾ ಸ್ಥಾನ ಪಡೆದಿದ್ದು, ಈ ಐದು ದೇಶಗಳ ಪಾಲು ಶೇಕಡ ೩೨ರಷ್ಟಾಗಿದೆ.
ಅಮೆರಿಕದ ಪೌರತ್ವ ಮತ್ತು ಇಮಿಗ್ರೇಶನ್ ಸೇವೆಗಳ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ೨೦೨೩ರ ವಾರ್ಷಿಕ ವರದಿ ಪ್ರಕಾರ, ಕಳೆದ ಒಂದು ದಶಕದಲ್ಲಿ ನೀಡಲಾದ ಸಂಖ್ಯೆಯಷ್ಟು ಪೌರತ್ವವನ್ನು ೨೦೨೨ ಹಾಗೂ ೨೦೨೩ರಲ್ಲಿ ನೀಡಲಾಗಿದೆ. ೨೦೨೨ರ ಯುಎಸ್ ಸಿಐಎಸ್ ಪ್ರಗತಿ ವರದಿಯಲ್ಲಿ ದೇಶವಾರು ಅಂಕಿ ಅಂಶಗಳನ್ನು ನೀಡಿರಲಿಲ್ಲ. ಈ ಮಾಹಿತಿಯನ್ನು ದೇಶದ ಒಳನಾಡು ಭದ್ರತಾ ವಿಭಾಗ ನೀಡುತ್ತಿತ್ತು.
೨೦೨೨ರಲ್ಲಿ ಸುಮಾರು ೯.೬೯ ಲಕ್ಷ ಮಂದಿ ಅಮೆರಿಕದ ಪೌರತ್ವ ಪಡೆದಿದ್ದು, ಮೆಕ್ಸಿಕೊದವರು ೧.೩ ಲಕ್ಷದೊಂದಿಗೆ (ಶೇಕಡ ೧೩.೩) ಅಗ್ರಸ್ಥಾನದಲ್ಲಿದ್ದರು. ಭಾರತದ ಪಾಲು ೬೫,೯೬೦ (ಶೇಕಡ ೬.೮) ಇತ್ತು. ಫಿಲಿಪೀನ್ಸ್ ನ ೫೩,೪೧೩ ಮಂದಿ ಅಮೆರಿಕದ ಪೌರತ್ವ ಪಡೆದು ಶೇಕಡ ೫.೫ರಷ್ಟು ಪಾಲು ಹೊಂದಿದ್ದರು.
ಗ್ರೀನ್ ಕಾರ್ಡ್ (ಕಾನೂನುಬದ್ಧ ಖಾಯಂ ನಿವಾಸಿ) ಪಡೆದು ಐದು ವರ್ಷ ಕಳೆದವರು ಅಮೆರಿಕದ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಮೆರಿಕನ್ ಮಹಿಳೆಯರನ್ನು ವಿವಾಹವಾದ ವ್ಯಕ್ತಿಗಳಿಗೆ, ಈ ಅವಧಿಯನ್ನು ಮೂರು ವರ್ಷಗಳಿಗೆ ಇಳಿಸಲಾಗಿದೆ. ಆದರೆ ಭಾರತೀಯರಿಗೆ ಗ್ರೀನ್ ಕಾರ್ಡ್ ಪಡೆಯಲು ಕೂಡಾ ಹಲವು ದಶಕಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಇದು ಅಮೆರಿಕದ ಪೌರತ್ವ ಪಡೆಯುವವರನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತಿದೆ.