೮೪ ಸಾವಿರ ಲಸಿಕೆ ಪಡೆದ ೧೮ ವರ್ಷ ಮೇಲ್ಪಟ್ಟವರು

ನವದೆಹಲಿ, ಮೇ.೨- ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೧೮ ರಿಂದ ೪೪ ವಯೋಮಿತಿಯ ೮೪,೫೯೯ ಫಲಾನುಭವಿಗಳು ಕೋವಿಡ್ ಸಂಬಂಧ ಮೊದಲು ಲಸಿಕೆ ಪಡೆದುಕೊಂಡಿದ್ದಾರೆ.

೧೮-೪೪ ವಯಸ್ಸಿನವರಿಗೆ ಲಸಿಕೆ ನೀಡುವ ಪ್ರಕ್ರಿಯೆಯ ಭಾಗವಾದ ನೋಂದಣಿ ಏಪ್ರಿಲ್ ೨೮ ರಿಂದ ಪ್ರಾರಂಭವಾಗಿದೆ. ಇದಲ್ಲದೇ ಮುಂಚೂಣಿ ಕಾರ್ಮಿಕರು ಮತ್ತು ೪೫ ವರ್ಷಕ್ಕಿಂತ ಮೇಲ್ಪಟ್ಟವರು ಸೇರಿದಂತೆ ದೇಶಾದ್ಯಂತ ಒಟ್ಟು ವ್ಯಾಕ್ಸಿನೇಷನ್ ೧೫.೬೬ ಕೋಟಿ ಗಡಿ ದಾಟಿದೆ.

ನಿನ್ನೆ ರಾತ್ರಿ ೮ ಗಂಟೆಯವರೆಗೆ ೧೬ ಲಕ್ಷಕ್ಕೂ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಲಾಯಿತು. ದೇಶದಲ್ಲಿ ನೀಡಲಾಗುವ ಕೊರೋನಾ ಲಸಿಕೆ ಪ್ರಮಾಣಗಳ ಸಂಚಿತ ಸಂಖ್ಯೆ ೧೫,೬೬,೩೭,೮೨೫. ಲಸಿಕೆ ಪಡೆದವರ ಪೈಕಿ ೯೪,೨೮,೦೬೦ ಮಂದಿ ಆರೋಗ್ಯ ಸಿಬ್ಬಂದಿ ಇದ್ದಾರೆ. ಇದರಲ್ಲೂ ೬೨,೬೪,೯೧೯ ಮಂದಿ ಎರಡನೇ ಬಾರಿಯ ಲಸಿಕೆ ಪಡೆದುಕೊಂಡಿದ್ದಾರೆ.

ಇನ್ನೂ, ಮುಂಚೂಣಿ ಕಾರ್ಯಕರ್ತರಲ್ಲಿ
೧,೨೬,೩೯,೩೦೩ ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದರೆ, ಎರಡನೇಯದಾಗಿ ೬೮,೭೭,೮೦೭ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಅದೇ ರೀತಿಯಲ್ಲಿ, ೧೮ರಿಂದ೪೪ ವರ್ಷ ವಯಸ್ಸಿನವರಿಗೆ ೮೪,೫೯೯ ಮೊದಲ ಡೋಸ್ ಅನ್ನು ನಿನ್ನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

೪೫ ರಿಂದ ೬೦ ವರ್ಷದೊಳಗಿನ ೫,೩೨,೮೦,೭೮೨ ಜನರು ಮೊದಲ ಡೋಸ್ ಪಡೆದರೆ, ೪೦,೦೮,೦೭೮ ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ೬೦ ವರ್ಷಕ್ಕಿಂತ ಮೇಲ್ಪಟ್ಟವರಿಗೆ ೫,೨೬,೧೩,೭೦೦ (೧ ನೇ ಡೋಸ್) ಮತ್ತು ೬೦ ವರ್ಷಕ್ಕಿಂತ ಮೇಲ್ಪಟ್ಟವರಿಗೆ ೧,೧೪,೪೦,೫೭೭ (೨ ನೇ ಡೋಸ್) ನೀಡಲಾಗಿದೆ.

ಅಷ್ಟೇ ಅಲ್ಲದೆ, ಸ್ಥಳೀಯ ಸಂಘ-ಸಂಸ್ಥೆಗಳೊಂದಿಗೆ ಜೊತೆಗೂಡಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಮತ್ತು ಕೇಂದ್ರ ಪ್ರದೇಶಗಳಿಗೆ ಸೂಚಿಸಿದ್ದು, ಕೋವಿಡ್ ಲಸಿಕೆ ನೀಡುವುದರ ಬಗ್ಗೆ ವಿಶೇಷ ನಿಗಾವಹಿಸಿದೆ.