೮೧ ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣು

ಬೆಂಗಳೂರು,ಏ.೨೮- ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳ ಪೈಕಿ ಆರ್ಥಿಕವಾಗಿ ೮೧ ಸೂಕ್ಷ್ಮ ಪ್ರದೇಶಗಳನ್ನು ಗುರ್ತಿಸಲಾಗಿದ್ದು, ಅಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ.
ಸೂಕ್ಷ್ಮ ಪ್ರದೇಶಗಳ ಪೈಕಿ ಬೆಂಗಳೂರು ವ್ಯಾಪ್ತಿಯಲ್ಲಿ ೫೨ ಪ್ರದೇಶಗಳಿದ್ದು,ಅಲ್ಲಿ ತೀವ್ರ ಹೆಚ್ಚಿನ ಸಿಬ್ಬಂದಿಗಳ ನಿಯೋಜಿಸಿ ತಪಾಸಣೆಗಳನ್ನು ತೀವ್ರಗೊಳಿಸಲಾಗಿದೆ.
ಈ ಪ್ರದೇಶಗಳಲ್ಲಿ ಅತೀ ಹೆಚ್ಚು ಅತೀ ಹೆಚ್ಚು ಹಣ, ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಹೀಗಾಗಿ ಇವುಗಳನ್ನು ಆರ್ಥಿಕ ಸೂಕ್ಷ್ಮ ಪ್ರದೇಶಗಳೆಂದು ಗುರ್ತಿಸಲಾಗಿದೆ.
ನಗರದ ೨೮ ಕ್ಷೇತ್ರಗಳ ಪೈಕಿ ೧೯ ಕ್ಷೇತ್ರಗಳನ್ನು ಆರ್ಥಿಕವಾಗಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಚುನಾವಣಾಧಿಕಾರಿಗಳು ಮತ್ತು ನಿಯೋಜಿತ ಏಜೆನ್ಸಿಗಳು ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.
ಮೊಬೈಲ್ ಸ್ಕ್ವಾಡ್:
ಇದೇ ಮೊದಲ ಬಾರಿಗೆ ನಗರದಲ್ಲಿ ಮೊಬೈಲ್ ಸ್ಕ್ವಾಡ್ ಗಳನ್ನೂ ನಿಯೋಜಿಸಲಾಗಿದ್ದು, ಈ ಸ್ಕ್ವಾಡ್ ನಲ್ಲಿ ೪-೫ ಮಂದಿ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ. ಅದರಲ್ಲಿ ಒಬ್ಬರು ಮ್ಯಾಜಿಸ್ಟ್ರೇಟ್ ಅಧಿಕಾರವನ್ನು ಹೊಂದಿರುವ ಅಧಿಕಾರಿಯಾಗಿರಲಿದ್ದಾರೆ.
೨೦೦ ಫ್ಲೈಯಿಂಗ್ ಸ್ಕ್ವಾಡ್‌ಗಳು, ೧೩೦ ಚೆಕ್‌ಪೋಸ್ಟ್ ತಂಡಗಳನ್ನು ಹೊರತುಪಡಿಸಿ, ಜಿಎಸ್‌ಟಿ, ಕೇಂದ್ರೀಯ ಅಬಕಾರಿ, ಪೊಲೀಸ್, ಸಾರಿಗೆ, ಆದಾಯ ತೆರಿಗೆ ಮತ್ತು ಇತರ ವಿಶೇಷ ತಂಡಗಳು ಈಗಾಗಲೇ ಅಕ್ರಮ ಚಟುವಟಿಕಗಳ ಮೇಲೆ ನಿಗಾ ಇರಿಸಿದ್ದಾರೆ.
ರಾಜ್ಯದಲ್ಲಿ ಹಣ-ಉಡುಗೊರೆ ನೀಡಿ ಮತದಾರರ ಒಲಿಸಿಕೊಳ್ಳುವ ಪ್ರಯತ್ನಗಳು ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದನ್ನು ಗಮನಿಸಿರುವ ಮುಖ್ಯ ಚುನಾವಣಾಧಿಕಾರಿಗಳು, ಜಾಗೃತೆ ವಹಿಸಲು ಕಾರ್ಯತಂತ್ರಗಳನ್ನು ಬದಲಿಸುತ್ತಿದ್ದಾರೆ.
ಹೆಚ್ಚಿನ ದಾಳಿ:
ನಗರದ ಹೊರವಲಯದಲ್ಲಿ ಕೇವಲ ಏಳು ಕ್ಷೇತ್ರಗಳಿದ್ದರೂ, ಕಳೆದ ಚುನಾವಣೆಗೆ ಹೋಲಿಸಿದರೆ ಈ ಪ್ರದೇಶಗಳಲ್ಲಿ ದಾಳಿಗಳು ಶೇ.೪೦೦ರಷ್ಟು ಹೆಚ್ಚಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಮ್ಮ ಸಿಬ್ಬಂದಿಗಳು ಸದಾಕಾಲ ಸಂಚರಿಸಿ ಅಕ್ರಮಗಳ ಮೇಲೆ ನಿಗಾವಹಿಸಿದೆ. ಇದೀಗ ಸಿಬ್ಬಂದಿಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ವಾಹನಗಳನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ. ರಾತ್ರಿ ವೇಳೆಗೆ ಮಾತ್ರವೇ ನಮ್ಮ ತಪಾಸಣೆ ಸೀಮಿತವಾಗಿಲ್ಲ. ಹಗಲಿನಲ್ಲೂ ತಪಾಸಣೆಗಳನ್ನು ನಡೆಸಲಾಗುತ್ತಿದೆ. ಬ್ಯಾಂಕ್ ವಹಿವಾಟುಗಳ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ