(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೮:ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಕಾವೇರಿ ಕಣಿವೆ ಭಾಗದಲ್ಲೂ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, ಕಾವೇರಿ ನೀರು ಅವಲಂಬಿತ ಪ್ರದೇಶದ ಜನರ ಆತಂಕ ದೂರವಾದಂತಾಗಿದೆ.
ಸಕಾಲದಲ್ಲಿ ಮುಂಗಾರು ಮಳೆಯಾಗದೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿದಿತ್ತು. ಇದರಿಂದ ಬೆಂಗಳೂರು ನಗರ ಸೇರಿದಂತೆ ಕಾವೇರಿ ಭಾಗದ ಪ್ರದೇಶಗಳಲ್ಲಿ ಆತಂಕ ಮೂಡಿಸಿತ್ತು. ಕುಡಿಯುವ ನೀರಿಗೂ ತತ್ವಾರ ಎದುರಾಗುವ ಪರಿಸ್ಥಿತಿ ರಪುಗೊಂಡಿತ್ತು. ಕಳೆದ ೪-೫ ದಿನಗಳಿಂದ ಕೊಡಗು ಸೇರಿದಂತೆ ಕಾವೆರಿ ಕಣಿವೆಯ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮೂರು ದಿನಗಳಲ್ಲಿ ಕೆಆರ್‌ಎಸ್‌ಗೆ ೩ ಟಿಎಂಸಿಯಷ್ಟು ನೀರು ಹರಿದು ಬಂದಿದೆ. ನಿನ್ನೆ ಒಂದೇ ದಿನ ೧ ಟಿಎಂಸಿ ನೀರು ಕೆಆರ್‌ಎಸ್ ಜಳಾಶಯಕ್ಕೆ ಬಂದಿದೆ.ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ೮೦ ಅಡಿಗೆ ತಲುಪಿದ್ದು, ಒಳಹರಿವು ೧೩,೪೯೯ ಕ್ಯೂಸೆಕ್ ಇದೆ. ಜಲಾಶಯದಿಂದ ೩೫೩ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದೇ ರೀತಿ ಮಳೆಯಾದರೆ ಕೆಆರ್‌ಎಸ್ ಜಲಾಶಯ ಆದಷ್ಟು ಶೀಘ್ರ ತುಂಬಲಿದ್ದು, ಕೆಆರ್‌ಎಸ್‌ನ ನೀರಿನ ಅವಲಂಬಿತ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸಾಗಿದೆ. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯಿಂದ ಸದ್ಯಕ್ಕೆ ಪಾರಾದಂತಾಗಿದೆ.
ಕೊಡಗಿನ ಹಾರಂಗಿ ಜಲಾಶಯದ ನೀರಿನ ಮಟ್ಟವೂ ಏರಿಕೆಯಾಗಿದೆ. ಕೇರಳದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯ ಒಳ ಹರಿವು ಹೆಚ್ಚಿದೆ.