೮೦೦ ಗೋಲು ಬಾರಿಸಿದ ರೊನಾಲ್ಡೊ

ಲಂಡನ್, ಡಿ.೩- ವಿಶ್ವದ ಖ್ಯಾತ ಫುಟ್ಬಾಲ್ ಹಾಗೂ ಶ್ರೀಮಂತ ಕ್ರೀಡಾಳುಗಳಲ್ಲಿ ಒಬ್ಬರಾಗಿರುವ ಕ್ರಿಸ್ತಿಯಾನೋ ರೊನಾಲ್ಡೋ ಇದೀಗ ಮತ್ತೊಂದು ಕೀರ್ತಿಗೆ ಪಾತ್ರರಾಗಿದ್ದಾರೆ. ತಮ್ಮ ವೃತ್ತಿ ಜೀವನದ ಉನ್ನತ ಮಟ್ಟದ ಟೂರ್ನಿಗಳಲ್ಲಿ ೮೦೦ ಗೋಲು ಗಳಿಸಿದ ವಿಶ್ವದ ಮೊದಲ ಫುಟ್ಬಾಲ್ ಆಟಗಾರ ಎಂಬ ಮಹೋನ್ನತ ಕೀರ್ತಿಗೆ ಇದೀಗ ರೊನಾಲ್ಡೊ ಭಾಜನರಾಗಿದ್ದಾರೆ.
ನಿನ್ನೆ ತಡರಾತ್ರಿ ಆರ್ಸೆನಾಲ್ ವಿರುದ್ಧದ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ೩-೨ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ರೊನಾಲ್ಡೊ ಮ್ಯಾಂಚೆಸ್ಟರ್ ಪರ ಎರಡು ಗೋಲು ಗಳಿಸಿ ಮಿಂಚುವ ಜೊತೆಗೆ ಉನ್ನತ ಮಟ್ಟದ ಟೂರ್ನಿಯಲ್ಲಿ ೮೦೦ ಗೋಲು ಗಳಿಸಿದ ದಾಖಲೆಗೂ ಪಾತ್ರರಾದರು. ಇನ್ನು ತನ್ನ ಕ್ರೀಡಾ ಜೀವನದಲ್ಲಿ ಪೋರ್ಚುಗಲ್ ಪರ ೧೧೫, ಮ್ಯಾಂಚೆಸ್ಟರ್ ಯುನೈಟೆಡ್ (ಇಂಗ್ಲಿಷ್ ಪ್ರೀಮಿಯರ್ ಲೀಗ್) ಪರ ೧೩೦, ರಿಯಲ್ ಮ್ಯಾಡ್ರಿಡ್ ಪರ ೪೫೦, ಸ್ಪೋರ್ಟಿಂಗ್ ಲಿಸ್ಬನ್ ಪರ ೫ ಸೇರಿದಂತೆ ಹಿಂದಿನ ಕ್ಲಬ್ ಜುವೆಂಟಸ್ ಪರ ೧೦೧ ಸೇರಿದಂತೆ ಒಟ್ಟು ಉನ್ನತ ಮಟ್ಟದ ಫುಟ್ಬಾಲ್ ಕ್ರೀಡೆಯಲ್ಲಿ ಇದೀಗ ರೊನಾಲ್ಡೊ ೮೦೧ ಗೋಲುಗಳ ಮಹೋನ್ನತ ದಾಖಲೆ ನಿರ್ಮಿಸಿದ್ದಾರೆ.