೭ ಮಂದಿ ಕೊಲೆ ಆರೋಪಿಗಳ ಬಂಧನ

ಚಿಕ್ಕಬಳ್ಳಾಪುರ, ಮಾ. ೨೫- ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿ ಆವುಲನಾಗೇನಹಳ್ಳಿ ಗ್ರಾಮದ ರಾಮಾಂಜಿ ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ೮ ಮಂದಿ ಆರೋಪಿಗಳು ಭಾಗಿಯಾಗಿದ್ದು, ಈ ಪೈಕಿ ೭ ಆರೋಪಿಗಳನ್ನು ವಶಕ್ಕೆ ಪಡೆದು ಪರಾರಿಯಾಗಿರುವ ಓರ್ವ ವ್ಯಕ್ತಿ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಇಂದು ಬೆಳಿಗ್ಗೆ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆವುಲನಾಗೇನಹಳ್ಳಿ ಗ್ರಾಮದಲ್ಲಿ ಕೊಲೆಯಾದ ರಾಮಾಂಜಿ ಮತ್ತು ಹತ್ಯೆ ಮಾಡಿದ ಪ್ರಮುಖ ಆರೋಪಿ ಅರವಿಂದ್ ಅವರ ಮಧ್ಯೆ ಜಮೀನು ವಿವಾದವೇ ಈ ಕೊಲೆಗೆ ಮೂಲ ಕಾರಣವಾಗಿದೆ.
ಸದರಿ ಪ್ರಕರಣದಲ್ಲಿ ಕೊಲೆ ಮಾಡಿದ ಪ್ರಮುಖ ಆರೋಪಿ ಅರವಿಂದ್ ಒಳಗೊಂಡಂತೆ, ಇನ್ನುಳಿದ ಚಿಕ್ಕಮಂಜ, ದೊಡ್ಡಮಂಜ, ಗಿರೀಶ್, ಪ್ರಸನ್ನ, ಅಮರ್ ನಾರಾಯಣಚಾರಿರವರುಗಳನ್ನು ಬಂಧಿಸಲಾಗಿದ್ದು, ದಿಲೀಪ್ ಎಂಬ ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಈತನ ಪತ್ತೆಗೂ ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹತೋಟಿಯಲ್ಲಿದೆ. ಆದರೂ ಸಹ ಸಣ್ಣಪುಟ್ಟ ಕಾರಣಗಳಿಗಾಗಿ ಪ್ರಾಣಬೆದರಿಕೆ, ಹತ್ಯೆಗೆ ಯತ್ನ ಹಾಗೂ ಹತ್ಯೆ ಮುಂತಾದ ಪ್ರಕರಣಗಳು ಕೆಲವೊಮ್ಮೆ ನಡೆಯುತ್ತವೆ. ಇವುಗಳ ನಿಯಂತ್ರಣಕ್ಕೂ ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು.