೭೬.೪ ಕೋ.ರೂ. ವೆಚ್ಚದಲ್ಲಿ ಸೈಕ್ಲಿಂಗ್ ಟ್ರ್ಯಾಕ್‌ಗೆ ಶಿಲಾನ್ಯಾಸ

ಮಂಗಳೂರು, ಎ.೨೧- ಸ್ಟಾರ್ಟ್ ಸಿಟಿ ಯೋಜನೆಯಡಿ ೭೬.೪ ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ನಿರ್ಮಾಣಗೊಳ್ಳಲಿರುವ ಸೈಕಲ್ ಟ್ರ್ಯಾಕ್‌ಗೆ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾರ್ನಮಿಕಟ್ಟೆಯಲ್ಲಿ ಸೋಮವಾರ ಶಿಲಾನ್ಯಾಸ ನಡೆಸಿದರು.

ಈ ಸಂದರ್ಭ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರಿನಲ್ಲಿ ಸೈಕ್ಲಿಂಗ್ ನಡೆಸುವ ಜನರು ಹೆಚ್ಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಜನತೆಯ ಬೇಡಿಕೆಯಂತೆ ಮೈಸೂರಿನಲ್ಲಿ ಇರುವಂತೆ ಇಲ್ಲಿಯೂ ಪ್ರತ್ಯೇಕ ಸೈಕಲ್ ಪಥ ನಿರ್ಮಿಸಲು ಸ್ಟಾರ್ಟ್ ಸಿಟಿ ಯೋಜನೆಯಡಿ ರೂಪರೇಷೆ ಸಿದ್ಧಪಡಿಸಿ ಶಿಲಾನ್ಯಾಸ ನೆರವೇರಿಸಲಾಗಿದೆ. ೧೨ ಕಿ.ಮೀ. ಉದ್ದದ ಈ ಟ್ರಾಕ್ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಮುತುವರ್ಜಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದರು. ಸೈಕಲ್ ಪಥ ಮಂಗಳೂರಿಗೆ ಹೊಸ ಯೋಜನೆ ಮತ್ತು ಪರಿಕಲ್ಪನೆಯಾಗಿದೆ. ಮಂಗಳೂರು ಮಂಗಳೂರನ್ನು ಸಾಂಸ್ಕೃತಿಕ ಹಾಗೂ ಪಾರಂಪರಿಕ ನಗರವನ್ನಾಗಿ ಉಳಿಸಿಕೊಂಡು ನಗರಕ್ಕೆ ನವ ವಿನ್ಯಾಸ ನೀಡುವ ಕಾಲಘಟ್ಟದಲ್ಲಿ ಶಾಸಕರು ಮಹತ್ವದ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಂಡು ಜನರಿಗೆ ಉಪಯೋಗವಾಗಲಿ ಎಂದಿದ್ದಾರೆ. ನೂತನ ಸೈಕಲ್ ಪಥ ನಗರದಲ್ಲಿ ಶೇ. ೩೦ ನೀರನ್ನು ಶಿಕ್ಷಣ ಸಂಸ್ಥೆಗಳನ್ನು ಹಾದುಹೋಗುತ್ತದೆ. ೨೬ ಶಿಕ್ಷಣ ಸಂಸ್ಥೆಗಳು, ೨೦ ಸಾರ್ವಜನಿಕ ಕಟ್ಟಡಗಳ ಸನಿಹದಲ್ಲಿ ಸೈಕಲ್ ಪಥ ನಿರ್ಮಾಣಗೊಳ್ಳಲಿದೆ. ಮಕ್ಕಳು ಮತ್ತು ವೃದ್ಧರಿಗೆ ಸಹಾಯವಾಗಲಿದೆ. ನಗರದ ಬೋಳಾರದಿಂದ ಪ್ರಾರಂಭವಾಗುವ ಸೈಕಲ್ ಪಥ ವೆಲೆನ್ಸಿಯಾ ಮಾರ್ನಮಿಕಟ್ಟೆ ಒಳಗೊಂಡಂತೆ ಕೊಡಿಯಾಲ್ ಬೈಲ್‌ನ ಟಿಎಂಎ ಪೈ ಸಭಾಂಗಣ ಬಳ ಕೊನೆಗೊಳ್ಳಲಿದೆ. ಮಂಗಳೂರಿನ ಬೈಸಿಕಲ್ ಕ್ಲಬ್‌ಗಳ ಒತ್ತಾಸೆಯಂತೆ ಮೊದಲ ಹಂತದಲ್ಲಿ ಈ ಯೋಜನೆ ಸಾಕಾರಗೊಳ್ಳುತ್ತಿದೆ. ೨೦೩೦ರ ವೇಳೆಗೆ ಮಂಗಳೂರನ್ನು ಸೈಕ್ಲಿಂಗ್ ಸ್ನೇಹಿ ನಗರವನ್ನಾಗಿ ರೂಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಮೇಯರ್ ಪ್ರೇಮಾನಂದ ಶೆಟ್ಟಿ, ಮುಡಾ ಅಧ್ಯಕ್ಷರವಿಶಂಕರ ಮಿಜಾರು, ಮನಪಾ ಸಚೇತಕ ಸುಧೀರ್ ಶೆಟ್ಟಕಣ್ಣೂರು, ಕಾರ್ಪೋರೇಟರ್ ಗಳು ಉಪಸ್ಥಿತರಿದ್ದರು.