೭ನೇ ವೇತನ ಆಯೋಗ ವರದಿ ಸಲ್ಲಿಕೆ

ಬೆಂಗಳೂರು, ಮಾ. ೧೬- ರಾಜ್ಯ ಸರ್ಕಾರಿ ನೌಕರರಿಗೆ ಶೇ. ೨೭.೫ ರಷ್ಟು ಹೆಚ್ಚಳಕ್ಕೆ ೭ನೇ ವೇತನ ಆಯೋಗ ಶಿಫಾರಸ್ಸು ಮಾಡಿದೆ. ಹಾಗೆಯೇ ಕನಿಷ್ಟ ಮೂಲ ವೇತನವನ್ನು ೧೭ ಸಾವಿರದಿಂದ ೨೭ ಸಾವಿರ ರೂ. ಹೆಚ್ಚಳದ ಶಿಫಾರಸ್ಸನ್ನು ಆಯೋಗ ಮಾಡಿದೆ.
ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್‌ರಾವ್ ಅಧ್ಯಕ್ಷತೆಯ ೭ನೇ ವೇತನ ಆಯೋಗವು ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ವರದಿ ಸಲ್ಲಿಸಿತು. ಈ ವರದಿಯಲ್ಲಿ ಮೂಲ ವೇತನ ಶೇ. ೨೭.೫ ರಷ್ಟು ವೇತನ ಹೆಚ್ಚಳ ಮಾಡಲು ಶಿಫಾರಸ್ಸು ಮಾಡಿದೆ. ಹಾಗೆಯೇ ಕನಿಷ್ಠ ಮೂಲ ವೇತನವನ್ನು ೧೭ ಸಾವಿರ ರೂ.ಗಳಿಂದ ೨೭ ಸಾವಿರ ರೂ.ಗಳಿಗೆ ಹೆಚ್ಚಿಸುವಂತೆಯೂ ವೇತನ ಆಯೋಗ ತನ್ನ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ವರದಿ ಪರಿಶೀಲನೆ ಸೂಕ್ತ ತೀರ್ಮಾನ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ೭ನೇ ವೇತನ ಆಯೋಗದ ವರದಿ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೭ನೇ ವೇತನ ಆಯೋಗ ಶೇ. ೨೭.೫ ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದೆ. ವರದಿ ಶಿಫಾರಸ್ಸುಗಳನ್ನು ಆರ್ಥಿಕ ಇಲಾಖೆ ಪರಿಶೀಲಿಸಿ ಸಲಹೆ ನೀಡಲಿದ್ದು, ನಂತರ ಆಯೋಗದ ಶಿಫಾರಸ್ಸುಗಳ ಜಾರಿ ಬಗ್ಗೆ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೆ ಶೇ. ೧೭ ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡಲಾಗಿದೆ ಅದು ಮುಂದುವರೆಯುತ್ತದೆ ಎಂದರು.
ವೇತನ ಆಯೋಗ ಇಂದು ತನ್ನ ಅಂತಿಮ ವರದಿಯನ್ನು ಸಲ್ಲಿಸಿ ಶೇ. ೨೭.೫ ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದೆ. ಈ ಬಗ್ಗೆ ಆರ್ಥಿಕ ಇಲಾಖೆ ಶಿಫಾರಸ್ಸುಗಳನ್ನು ಪರಿಶೀಲಿಸಲು ೨-೩ ದಿನಗಳು ಬೇಕಾಗುತ್ತದೆ. ಆರ್ಥಿಕ ಇಲಾಖೆಯಿಂದ ವರದಿ ಶಿಫಾರಸ್ಸಿನ ನಂತರ ಬರುವ ಸಲಹೆಗಳನ್ನು ಪರಿಶೀಲಿಸಿ ೭ನೇ ವೇತನ ಆಯೋಗದ ಜಾರಿ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳುವ ಮೂಲಕ ಲೋಕಸಭಾ ಚುನಾವಣೆ ನಂತರವಷ್ಟೇ ಆಯೋಗದ ಶಿಫಾರಸ್ಸುಗಳ ಜಾರಿ ಎಂಬ ಸುಳಿವು ನೀಡಿದರು.
ವೇತನ ಆಯೋಗದ ವರದಿಯು ಮಾರ್ಚ್ ೧೫ ಕ್ಕೆ ಕೊನೆಗೊಂಡಿತ್ತು. ನಿನ್ನೆ ನಾನು ಮೈಸೂರಿನಲ್ಲಿದ್ದ ಕಾರಣ ವರದಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ವರದಿಯನ್ನು ಸ್ವೀಕರಿಸಿದ್ದೇನೆ. ವರದಿಯಲ್ಲಿ ಅನೇಕ ಶಿಫಾರಸ್ಸುಗಳಿದ್ದು, ವರದಿಯನ್ನು ಆರ್ಥಿಕ ಇಲಾಖೆಗೆ ನೀಡುತ್ತೇನೆ. ಆರ್ಥಿಕ ಇಲಾಖೆಯು ವರದಿಯನ್ನು ಕೂಲಂಕುಷವಾಗಿ ಅಧ್ಯಯನ ವರದಿ ನೀಡಿದ ನಂತರ ಸಲಹೆಗಳ ಆಧಾರದ ಮೇಲೆ ಸರ್ಕಾರ ತೀರ್ಮಾನ ಮಾಡಲಿದೆ ಎಂದರು.
ಆಯೋಗದ ವರದಿಯ ಶಿಫಾರಸ್ಸುಗಳ ಬಗ್ಗೆ ಹೆಚ್ಚೇನು ಈಗ ಹೇಳುವುದಿಲ್ಲ. ವರದಿಯಲ್ಲಿ ಕನಿಷ್ಠ ಮೂಲ ವೇತನವನ್ನು ೧೭ ಸಾವಿರ ರೂ.ಗಳಿಂದ ೨೭ ಸಾವಿರ ರೂ.ಗಳಿಗೆ ಹೆಚ್ಚಿಸುವ ಶಿಫಾರಸ್ಸು ಇದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
೭ನೇ ವೇತನ ಆಯೋಗ ರಚನೆಯಾದ ನಂತರ ಈ ಹಿಂದೆಯೇ ಸರ್ಕಾರ ಮೂಲ ವೇತನ ಶೇ. ೧೭ ರಷ್ಟು ವೇತನ ಹೆಚ್ಚಳ ಮಾಡಿದೆ. ಅದು ಮುಂದುವರೆಯಲಿದೆ. ಈಗ ಅಂತಿಮ ಶಿಫಾರಸ್ಸುಗಳನ್ನು ಅಧ್ಯಯನ ಮಾಡಿ ಅವುಗಳ ಜಾರಿ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಪುನರುಚ್ಛರಿಸಿದರು.
ಈ ಸಂದರ್ಭದಲ್ಲಿ ೭ನೇ ವೇತನ ಆಯೋಗದ ಸದಸ್ಯರುಗಳಾದ ಬಿ.ಬಿ. ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅಶ್ವಿಕ್, ಡಾ. ಕೆ. ತ್ರೀಲೋಕಚಂದ್ರ, ಹಣಕಾಸು ಇಲಾಖೆ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ವೇತನ ಆಯೋಗದ ಸದಸ್ಯ ಕಾರ್ಯದರ್ಶಿ ಹೆಪ್ಸಿಬಾರಾಣಿ ಕೊರ್ಲಪಾಟಿ ಉಪಸ್ಥಿತರಿದ್ದರು.