೭ನೇ ವೇತನ ಆಯೋಗ ರಚನೆ

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ಡಿ.ಪಿ.ಎ.ಆರ್ ಆಯೋಜಿಸಿದ್ದ ಸರ್ವೋತ್ತಮ ಸೇವಾ ಪ್ರಶಸ್ತಿ ಸಮಾರಂಭವನ್ನು ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸಿದರು. ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮಂಜುನಾಥ ಪ್ರಸಾದ್ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಇದ್ದಾರೆ.

ಬೆಂಗಳೂರು,ಸೆ.೬- ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ೭ನೇ ವೇತನ ಆಯೋಗವನ್ನು ಮುಂದಿನ ತಿಂಗಳು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸವರಾಜ ಬೊಮ್ಮಾಯಿ ಹೇಳಿದರು.ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿಂದು ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಡಿಪಿಎಆರ್ ಆಯೋಜಿಸಿದ್ದ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ೭ನೇ ವೇತನ ಆಯೋಗ ರಚಿಸುವುದಾಗಿ ಈ ಹಿಂದೆಯೇ ಹೇಳಿದ್ದೆ. ಅದರಂತೆ ಅಕ್ಟೋಬರ್‌ನಲ್ಲಿ ೭ನೇ ವೇತನ ಆಯೋಗ ರಚನೆಯಾಗಲಿದೆ ಎಂದರು.ಕಾರ್ಯಾಂಗ ಉತ್ತಮವಾಗಿ ಕೆಲಸ ಮಾಡಿದರೆ ನಾಡು ಅಭಿವೃದ್ಧಿಯಾಗುತ್ತದೆ. ನಾಡಿನ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಕೆಲಸ ಪಾತ್ರ ಪ್ರಮುಖವಾಗಿದೆ ಎಂದರು.ವಿಧಾನಸೌಧದ ಮೇಲೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬರೆಯಲಾಗಿದೆ. ಹೀಗಾಗಿ, ಸರ್ಕಾರಿ ನೌಕರರು ಆತ್ಮಸಾಕ್ಷಿಯಾಗಿ ಕೆಲಸ ಮಾಡಬೇಕು. ಆಗ ರಾಜ್ಯ ಸುಭೀಕ್ಷವಾಗುತ್ತದೆ. ಕರ್ತವ್ಯಕ್ಕೂ ಕಾಯಕಕ್ಕೂ ಬಹಳ ವ್ಯತ್ಯಾಸವಿದೆ. ಕರ್ತವ್ಯವೆಂದರೆ ನಮ್ಮ ಕೆಲಸವಷ್ಟೇ ಮಾಡುವುದು, ಕಾಯಕ ಎಂದರೆ ಜವಾಬ್ದಾರಿಯಿಂದ ಕೆಲಸ ಮುಗಿಯುವವರೆಗೂ ಮಾಡುವುದು ಎಂದರು.
ಪ್ರಜಾಪ್ರಭುತ್ವದಲ್ಲಿ ಜನರೇ ನಮ್ಮ ಮಾಲೀಕರು. ಜನ ಕಲ್ಯಾಣ ಕೆಲಸವನ್ನು ಮಾಡಿದರೆ ಅದೇ ಸ್ವರ್ಗ ಸುಖ. ನಿಮ್ಮ ಸರ್ವೀಸ್‌ನಲ್ಲಿ ಬಡವರಿಗೆ ನಿಮ್ಮ ನಿರ್ಣಯಗಳಿಂದ ಸಹಾಯವಾದರೆ ಅವರು ನಿಮ್ಮನ್ನು ನೆನೆಸುತ್ತಾರೆ. ನಾವೆಲ್ಲ ಸೇವೆ ಮಾಡೋಕೆ ಇರೋರು. ಜನಸಾಮಾನ್ಯರು ನಮಗೆ ಸಂಬಳ ಕೊಡುತ್ತಿದ್ದಾರೆ. ಅವರೇ ನಮ್ಮ ಮಾಲೀಕರು. ಅವರಿಗೋಸ್ಕರ ದುಡಿಯುವುದು ನಮ್ಮ ಕೆಲಸ ಎಂದರು.
ಜನಸಾಮಾನ್ಯರು ಕಚೇರಿಗೆ ಬಂದಾಗ ಗೌರವ ಕೊಟ್ಟು ಪ್ರಮಾಣಿಕ ಕೆಲಸ ಮಾಡಿ ಖುಷಿ ಸಿಗುತ್ತದೆ ಎಂದು ಮುಖ್ಯಮಂತ್ರಿಗಳು ಸರ್ಕಾರಿ ನೌಕರರಿಗೆ ಕರೆ ನೀಡಿದರು.ದುಡ್ಡಿನಿಂದ ವಸ್ತುಗಳನ್ನು ಕೊಂಡುಕೊಳ್ಳಬಹುದು, ಮನೆ ಕಟ್ಟಬಹುದು, ಒಳ್ಳೆಯ ಕೆಲಸದಿಂದ ಆತ್ಮಕ್ಕೆ ಸಮಾಧಾನ ಸಿಗುತ್ತದೆ. ಜನರಿಗೆ ಸ್ಪಂದಿಸುವ ಕೆಲಸ ಮಾಡೋಣ ಎಂದರು.ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಮಾಡಿದ್ದೇವೆ. ವೇತನ ಪರಿಷ್ಕರಣೆಯೂ ಸದ್ಯದಲ್ಲೇ ಆಗಲಿದೆ ಎಂದು ಅವರು ಹೇಳಿದರು.
ಸರ್ಕಾರ ಪುಣ್ಯಕೋಟಿ ಯೋಜನೆಯನ್ನು ಮಾಡಿದೆ. ೫೦ ಕೋಟಿ ರೂ. ವೆಚ್ಚದಲ್ಲಿ ಹೊಸ ಗೋ ಶಾಲೆಗಳನ್ನು ಮಾಡುತ್ತಿದ್ದೇವೆ. ೧೧ ಸಾವಿರ ರೂ.ಗೆ ಒಂದು ಗೋವನ್ನು ದತ್ತು ತೆಗೆದುಕೊಳ್ಳಲು ಯೋಜನೆ ಮಾಡಿದ್ದೇವೆ. ಗೋವನ್ನು ದತ್ತು ತೆಗೆದುಕೊಳ್ಳಿ ನಿಮಗೂ ಪುಣ್ಯ ಬರುತ್ತದೆ ಎಂದರು.ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅತ್ಯುತ್ತಮ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.ಈ ಸಮಾರಂಭದಲ್ಲಿ ಸಚಿವರುಗಳಾದ ಆರ್. ಅಶೋಕ್, ಕೋಟಾಶ್ರೀನಿವಾಸ ಪೂಜಾರಿ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ ಮಂಜುನಾಥ್‌ಪ್ರಸಾದ್. ಸಿಆಸುಇ ಕಾರ್ಯದರ್ಶಿ ಹೇಮಲತಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.