೬ ವರ್ಷದ ಬಾಲಕಿ ಮೇಲೆ ಅತ್ಯಾಚಾರ : ೧೦ ದಿನದಲ್ಲಿ ಅತ್ಯಾಚಾರಿಗೆ ಶಿಕ್ಷೆ

ಪ್ರತಾಪ್‌ಗಢ, ಸೆ ೨೩- ೬ ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಆರೋಪಿಗೆ ಉತ್ತರಪ್ರದೇಶದ ಪೋಕ್ಸೋ ನ್ಯಾಯಾಲಯ ಕೇವಲ ೧೦ ದಿನದಲ್ಲಿ ಇತ್ಯರ್ಥಪಡಿಸಿ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.ದೇಶದಲ್ಲಿ ಅತ್ಯಾಚಾರ ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಆರೋಪಿಗಳು ಪ್ರಕರಣದಿಂದ ಬಹಳ ಸುಲಭವಾಗಿ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತವೆ. ಇಂತಹ ಸಂದರ್ಭದಲ್ಲಿ ಉತ್ತರಪ್ರದೇಶದ ಪೋಕ್ಸೋ ನ್ಯಾಯಾಲಯ ಕೇವಲ ೧೦ ದಿನದಲ್ಲಿ ತೀರ್ಪು ಪ್ರಕಟಿಸಿ ನ್ಯಾಯವನ್ನೇ ಎತ್ತಿಹಿಡಿದಿದೆ.
ಉತ್ತರಪ್ರದೇಶದ ಪೋಕ್ಸೋ ಕೋರ್ಟ್, ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ, ೨೦ ಸಾವಿರ ದಂಡ ವಿಧಿಸಿ ಮಹತ್ವ ಆದೇಶ ಹೊರಡಿಸಿದೆ.ಆರೋಪಿ ಭೂಪೇಂದ್ರ ಸಿಂಗ್ಗೆ ಪೋಕ್ಸೋ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಪಂಕಜ್ ಕುಮಾರ್ ಶ್ರೀವಾಸ್ತವ ಕಠಿಣ ಶಿಕ್ಷೆಯನ್ನು ವಿಧಿಸಿದ್ದಾರೆ.
ಪ್ರತಾಪ್‌ಗಢದ ಕೊತ್ವಾಲಿಯಲ್ಲಿ ೬ ವರ್ಷದ ಬಾಲಕಿಯ ಮೇಲೆ ಅಪರಾಧಿ ಭೂಪೇಂದ್ರ ಸಿಂಗ್ ಆಗಸ್ಟ್ ೧೨ ರಂದು ಅತ್ಯಾಚಾರ ಎಸಗಿದ್ದ. ಗ್ರಾಮಸ್ಥರು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಆಗಸ್ಟ್ ೧೩ ರಂದು ಕೊತ್ವಾಲಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸೆಪ್ಟೆಂಬರ್ ೩ ರಂದು ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಅಂದೇ ಕೋರ್ಟ್ ಚಾರ್ಜ್ ಶೀಟ್ ಅನ್ನು ಪರಿಗಣನೆಗೆ ತೆಗದುಕೊಂಡಿತ್ತು.
ಸೆಪ್ಟೆಂಬರ್ ೧೨ ರಂದು ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿ, ೧೬ರ ವರೆಗೆ ಪ್ರಕರಣದಲ್ಲಿ ೮ ಸಾಕ್ಷಿಗಳು ಸಾಕ್ಷಿ ಹೇಳಿದ್ದರು. ಸೆ.೧೭ರಂದು ಆರೋಪಿ ಭೂಪೇಂದ್ರನ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಸೆಪ್ಟೆಂಬರ್ ೨೦ ರಂದು ವಾದಮುಗಿದು, ಸೆಪ್ಟೆಂಬರ್ ೨೧ ರಂದು ಭೂಪೇಂದ್ರ ಸಿಂಗ್ ದೋಷಿ ಎಂದು ತೀರ್ಪು ನೀಡಲಾಯಿತು. ನ್ಯಾಯಾಧೀಶರ ಈ ತ್ವರಿಯ ನ್ಯಾಯಕ್ಕೆ ಭಾರೀ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.