೬ ತಿಂಗಳ ರೈತರ ಹೋರಾಟ ಪ್ರಧಾನಿಯ ‘ಮೌನ’ ಖಂಡನೀಯ

ಪುತ್ತೂರು, ಮೇ ೨೭- ಕಳೆದ ೬ ತಿಂಗಳಿಂದ ದೆಹಲಿಯ ಗಡಿಯಲ್ಲಿ ಲಕ್ಷಾಂತರ ರೈತರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಹೋರಾಡುತ್ತಿದ್ದರೂ ಮೌನವಾಗಿಯೇ ಇರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಖಂಡನೀಯ ಎಂದು ಹಿರಿಯ ಕಮ್ಯೂನಿಸ್ಟ್ ನಾಯಕ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.
ರೈತರ ಹೋರಾಟ ಬೆಂಬಲಿಸಿ ಇಂದು ದೇಶದಾದ್ಯಂತ ನಡೆಯುತ್ತಿರುವ ಕರಾಳ ದಿನಾಚರಣೆ ಅಂಗವಾಗಿ ಮನೆ ಮನೆಯಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕಮ್ಯೂನಿಸ್ಟ್ ನೇತೃತ್ವದ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಪುತ್ತೂರು ಉಪವಿಭಾಗಾಧಿಕಾರಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಿದ ಬಳಿಕ ಈ ಹೇಳಿಕೆ ನೀಡಿದರು. ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ಗಳಿಗೆ ತಂದ ತಿದ್ದುಪಡಿಗಳನ್ನು ತಕ್ಷಣ ರದ್ದುಪಡಿಸಬೇಕು ಹಾಗೂ ವಿದ್ಯುತ್ ಕಾಯ್ದೆ, ಗುತ್ತಿಗೆ ಕೃಷಿ ಪದ್ದತಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದವರು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ರೂಪೇಶ್ ರೈ ಅವರು ಮಾತನಾಡಿ, ರೈತರ ದಿಟ್ಟ ಹೋರಾಟ ದೇಶದಾದ್ಯಂತ ನಡೆಯುವ ಮುನ್ನ ಸರ್ಕಾರ ಎಚ್ಚೆತ್ತುಕ್ಕೊಳ್ಳಬೇಕು. ಈಗಾಗಲೇ ೬೦೦ ರೈತರು ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಜನರ ಸಾವನ್ನು ನೋಡುತ್ತಾ ಖುಷಿ ಪಡುವ ಸರ್ಕಾರದ ನಡೆ ಖಂಡನೀಯವಾಗಿದೆ ಎಂದ ಅವರು ಕೊರೋನಾ ದಿಂದಲೂ ಜನ ಸಾಯಲು ಸರಕಾರದ ನಿರ್ಲಕ್ಷ ಧೋರಣೆಯೇ ಕಾರಣ. ತಕ್ಷಣ ಕೃಷಿ ಸಂಬಂದಿತ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು. ರೈತ ಸಂಘದ ಜಿಲ್ಲಾ ಕಾರ್ಯದರ್ಶಿ
ಇಬ್ರಾಹಿಂ ಖಲೀಲ್ ಉಪಸ್ಥಿತರಿದ್ದರು.