
ಬೆಂಗಳೂರು,ಸೆ.೬-ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ೫,೮೩೦ ಜನರು ಸಾವನ್ನಪ್ಪಿದ್ದಾರೆ.
ಕಳೆದ ಮೇ ನಲ್ಲಿ ೧,೦೯೪ ಜನ, ಜೂನ್ ನಲ್ಲಿ ೯೬೫, ಜುಲೈನಲ್ಲಿ ೮೦೭, ಆಗಸ್ಟ್ ನಲ್ಲಿ ೭೯೫ ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ರಸ್ತೆ ಅಪಘಾತಗಳು ನಡೆಯುತ್ತಿವೆ. ಜನರ ಪ್ರಾಣ ಉಳಿಸಲು ರಸ್ತೆ ಸುರಕ್ಷತಾ ಉಪಕ್ರಮಗಳನ್ನು ನಿರಂತರ ಹಾಗೂ ವ್ಯಾಪಕವಾಗಿ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಜೊತೆಗೆ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅತಿವೇಗದಲ್ಲಿ ಚಾಲನೆ ಮಾಡುತ್ತಿದ್ದ ಕಾರು ಚಾಲಕನ ಡಿಎಲ್ ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿದೆ. ಅಲ್ಲದೇ, ಅದೇ ದಾರಿಯಲ್ಲಿ ನಿಯಮ ಉಲ್ಲಂಘಿಸಿ ಎದುರಿನಿಂದ ಬಂದ ವಾಹನದ ಚಾಲಕನ ವಿರುದ್ಧ ಎಫ್ ಐಆರ್ ದಾಖಲಿಸಲು ಹಾಗೂ ಡಿಎಲ್ ಅಮಾನತುಗೊಳಿಸುವಂತೆ ಸೂಚಿಸಲಾಗಿದೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.