೬೫೭ ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ

(ಸಂಜೆವಾಣಿ ಪ್ರತಿನಿಧಿಯಿಂದ)
ತುಮಕೂರು, ಜ. ೨೯- ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕಲ್ಪತರುನಾಡಿನಲ್ಲಿ ೬೫೭.೨೭ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ನಗರದ ಬಿ.ಹೆಚ್. ರಸ್ತೆಯ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಿದ್ದಪಡಿಸಿದ ಬೃಹತ್ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್, ಇಂಧನ ಸಚಿವ ಕೆ.ಜೆ. ಜಾರ್ಜ್, ಸಾರಿಗೆ ಸಚಿವ ಆರ್. ರಾಮಲಿಂಗಾರೆಡ್ಡಿ ಸೇರಿದಂತೆ ಪಕ್ಷದ ಸಚಿವರು, ಶಾಸಕರುಗಳು ಪಾಲ್ಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ವಿವಿಧ ಇಲಾಖೆಯ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಶಾಸಕ ಜ್ಯೋತಿಗಣೇಶ್ ವಹಿಸಿದ್ದರೂ ಸಹ ಕಾಂಗ್ರೆಸ್ ನಾಯಕರ ಶಕ್ತಿ ಪ್ರದರ್ಶನ ನಡೆಯಿತು. ಬೃಹತ್ ವೇದಿಕೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರುಗಳು ನೆರೆದಿದ್ದ ಅಪಾರ ಜನಸ್ತೋಮದತ್ತ ಕೈಬೀಸುತ್ತಿದ್ದಂತೆ ಕೈ ಕಾರ್ಯಕರ್ತರು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳ ಹರ್ಷೋದ್ಘಾರ, ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದವು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ೫ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ ಎಂದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ೭ ತಿಂಗಳು ಕಳೆದಿದ್ದು, ೫ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಸಹ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ಧಿ ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದರು.
ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಉದ್ಘಾಟನೆ
ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ೧ ಸಾವಿರ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಸಮಗ್ರ ಮರು ಅಭಿವೃದ್ಧಿ (ಮೊದಲ ಹಂತ) ಕಾಮಗಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ಆರ್. ರಾಮಲಿಂಗರೆಡ್ಡಿ ಉದ್ಘಾಟಿಸಿದರು.
ಅಭಿವೃದ್ಧಿ ಕಾಮಗಾರಿಗಳು
ಜಿಲ್ಲೆಯ ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಸಿರಾ, ತಿಪಟೂರು, ತುಮಕೂರು ಮತ್ತು ತುರುವೇಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ೬೫೮ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಿದರು.
ಕೊರಟಗೆರೆ ತಾಲ್ಲೂಕಿನ ಕೊರಟಗೆರೆ-ಮಾವತ್ತೂರು-ತೊಂಡೇಬಾವಿ ರಸ್ತೆಯ ಸರಪಳಿ ೬.೫೦ ಕಿ.ಮೀ. ಸೇತುವೆ ಪುನರ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ, ಮಧುಗಿರಿ ತಾಲ್ಲೂಕು ಶಂಭೋನಹಳ್ಳಿ ಗೇಟ್‌ನಿಂದ ಶಂಭೋನಹಳ್ಳಿ, ಗಂಜಲಗುಂಟೆ, ಮರವೇಕೆರೆ, ಬಂದ್ರೇಹಳ್ಳಿ ರಸ್ತೆ. ೦.೭೫ ಕಿ.ಮೀ. ನಲ್ಲಿ ಬಾಕ್ಸ್ ಕಲ್ವರ್ಟ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು. ಸಿದ್ದಗಂಗಾ ಮಠದ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ, ಬೆಳಗುಂಬ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪುರುಷರ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟನೆ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿನ ಒಟ್ಟು ೬೫೭.೨೭ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಿದರು.
ಸವಲತ್ತು ವಿತರಣೆ
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಯೋಜನೆಗಳ ೩೦೧೨೨೫ ಫಲಾನುಭವಿಗಳಿಗೆ ೧೬೩೧೯.೨೬ ಲಕ್ಷ ರೂ. ವೆಚ್ಚದ ಸವಲತ್ತು, ಸಲಕರಣೆಗಳನ್ನು ಮುಖ್ಯಮಂತ್ರಿಗಳು ವಿತರಿಸಿ, ಪ್ರೋತ್ಸಾಹಿಸಿದರು.
ಹರಿದು ಬಂದ ಫಲಾನುಭವಿಗಳು
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿಂದು ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲೆಯ ೧೦ ತಾಲ್ಲೂಕುಗಳ ೧೧ ವಿಧಾನಸಭಾ ಕ್ಷೇತ್ರಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತ್ತು. ಜಿಲ್ಲೆಯ ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ತುಮಕೂರು, ಗುಬ್ಬಿ, ಕೊರಟಗೆರೆ, ಮಧುಗಿರಿ, ಸಿರಾ ಹಾಗೂ ಪಾವಗಡ ತಾಲ್ಲೂಕುಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಫಲಾನುಭವಿಗಳು ಸಹಸ್ರಾರು ಸಂಖ್ಯೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಹರಿದು ಬಂದಿದ್ದು, ಕಾರ್ಯಕ್ರಮದ ಮೆರಗನ್ನು ಮತ್ತಷ್ಟು ಇಮ್ಮಡಿಗೊಳಿಸಿತ್ತು.
ಬೆಳಿಗ್ಗೆ ೯ ಗಂಟೆಯಿಂದಲೇ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಕಾಂಗ್ರೆಸ್ ಕಾರ್ಯಕರ್ತರ ದಂಡು ಹರಿದು ಬರುತ್ತಿದ್ದು, ತುಮಕೂರಿನ ರಸ್ತೆಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು.
ಇಂದು ಸೋಮವಾರವಾದ್ದರಿಂದ ಕಳೆದ ೩ ದಿನಗಳ ರಜೆಯಲ್ಲಿದ್ದ ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಪರದಾಡುವಂತಾಯಿತು.