೬೦ ಲಕ್ಷ ಮತದಾರರ ಮಾಹಿತಿ ಸಂಗ್ರಹ
ಚಿಲುಮೆ ಕರ್ಮಕಾಂಡ

ಬೆಂಗಳೂರು,ನ.೧೯- ಬೆಂಗಳೂರಿನಲ್ಲಿ ಮತದಾರರ ಪಟ್ಟಿಗೆ ಖಾಸಗಿ ಸಂಸ್ಥೆಯಾದ ಚಿಲುಮೆ ಕನ್ನ ಹಾಕಿ ಮತದಾರರ ದತ್ತಾಂಶವನ್ನು ಮಾರಾಟ ಮಾಡಿಕೊಂಡಿರುವ ಹಗರಣ ಬಗೆದಷ್ಟು ದೊಡ್ಡದಾಗುತ್ತಿದ್ದು, ಚಿಲುಮೆ ಸಂಸ್ಥೆ ಸುಮಾರು ೬೦ ಲಕ್ಷ ಮತದಾರರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದೆ ಎಂಬ ಆಘಾತಕಾರಿ ವಿವರಗಳು ಹೊರ ಬಂದಿವೆ.
ಬೆಂಗಳೂರಿನ ೯೦ ಲಕ್ಷ ಮತದಾರರ ಪೈಕಿ ೬೦ ಲಕ್ಷ ಮತದಾರರ ಮಾಹಿತಿ ಸಂಗ್ರಹವಾಗಿದ್ದು, ಬೆಂಗಳೂರಿನ ೨೮ ಮತಕ್ಷೇತ್ರಗಳ ಬೂತ್ ಮಟ್ಟದಲ್ಲಿ ಮತದಾರರ ಹೆಸರು, ಮೊಬೈಲ್ ನಂಬರ್, ಉದ್ಯೋಗ, ಜಾತಿ ಕಳೆದ ಬಾರಿ ಯಾರಿಗೆ ಎಷ್ಟು ವೋಟ್ ಹಾಕಲಾಗಿತ್ತು. ಯಾವ ಬೂತ್‌ನಲ್ಲಿ ಎಷ್ಟು ಮಂದಿ ಮತದಾರರು ಇದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಚಿಲುಮೆ ಸಂಸ್ಥೆಯ ವಿರುದ್ಧ ಬಿಬಿಎಂಪಿ ದೂರು ದಾಖಲಿಸುತ್ತಿದ್ದಂತೆಯೇ ಪೊಲೀಸರು ಮಲ್ಲೇಶ್ವರದಲ್ಲಿರುವ ಚಿಲುಮೆ ಸಂಸ್ಥೆ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಪೊಲೀಸರು ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಕೆಲವು ಮಾಹಿತಿಗಳು ಲಭ್ಯವಾಗಿದ್ದು, ಚಿಲುಮೆ ಸಂಸ್ಥೆ ೬೦ ಲಕ್ಷ ಮತದಾರರ ಮಾಹಿತಿಯನ್ನು ಸಂಗ್ರಹಿಸಿದೆ ಎನ್ನಲಾಗಿದೆ.
ಚಿಲುಮೆ ಸಂಸ್ಥೆಗೆ ಮತದಾರರ ಗುರುತಿನ ಚೀಟಿ ಜತೆ ಆಧಾರ್ ಜೋಡಣೆ ಹಾಗೂ ಮತದಾರರ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಈ ಸಂಸ್ಥೆ ಮತದಾರರ ಮಾಹಿತಿಯನ್ನು ಸಂಗ್ರಹಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿರುವ ಆರೋಪದ ಬಗ್ಗೆ ಗೊತ್ತಾಗುತ್ತಿದ್ದಂತೆಯೇ ದೂರು ದಾಖಲಿಸಿದೆ. ಹಾಗೆಯೇ ೨೦೧೮ ರಿಂದ ಚಿಲುಮೆ ಸಂಸ್ಥೆಗೆ ಮತದಾರರ ಜಾಗೃತಿಗೆ ನೀಡಿದ ಅನುಮತಿಯನ್ನು ರದ್ದು ಮಾಡಿದೆ.
ಚಿಲುಮೆ ಸಂಸ್ಥೆಯು ಜಾಗೃತಿ ಅಭಿಯಾನದ ಬದಲು ಮತದಾರರ ಮಾಹಿತಿ ಸಂಗ್ರಹ ಮಾಡುವ ಮೂಲಕ ಬಿಬಿಎಂಪಿ ಅನುಮತಿಯನ್ನು ದುರ್ಬಳಕೆ ಮಾಡಿಕೊಂಡಿದೆ. ನಕಲಿ ಐಡಿಗಳನ್ನು ಸೃಷ್ಟಿಸಿದೆ ಎಂಬ ಆರೋಪಗಳ ಬಗ್ಗೆಯೂ ಈಗ ತನಿಖೆ ನಡೆದಿದೆ.
ಚಿಲುಮೆ ಸಂಸ್ಥೆ ಮತದಾರರ ಮಾಹಿತಿ ಸಂಗ್ರಹ ಮಾಡುತ್ತಿರುವ ಬಗ್ಗೆ ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಸಮನ್ವಯ ಎಂಬ ಸಂಸ್ಥೆ ಬಿಬಿಎಂಪಿಗೆ ದೂರು ನೀಡಿತ್ತು. ಇಷ್ಟಾದರೂ ಬಿಬಿಎಂಪಿ ಅವರು ದೂರು ನೀಡಲು ವಿಳಂಬ ಮಾಡಿದ್ದು ಏಕೆ? ಹಾಗೆಯೇ, ಚುನಾವಣಾ ಆಯೋಗಕ್ಕೂ ಏಕೆ ಮಾಹಿತಿ ನೀಡಿಲ್ಲ ಎಂಬ ಪ್ರಶ್ನೆಗಳು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.
ಮತದಾರರ ಮಾಹಿತಿ ಆಧಾರ್‌ಲಿಂಕ್ ಮಾಡುವ ಹೊಣೆಯನ್ನು ಖಾಸಗಿ ಸಂಸ್ಥೆಯಾಗಿರುವ ಚಿಲುಮೆ ಸಂಸ್ಥೆಗೆ ನೀಡಿದ್ದ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗಿದ್ದು, ಗೌಪ್ಯ ಮಾಹಿತಿ ಸಂಗ್ರಹಣಾ ಕಾರ್ಯವನ್ನು ಖಾಸಗಿ ಸಂಸ್ಥೆಗೆ ನೀಡಿರುವ ಬಗ್ಗೆಯೂ ಅನುಮಾನಗಳು ಮೂಡಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಒಟ್ಟಾರೆ ೬.೭ ಲಕ್ಷ ಮತದಾರರ ಹೆಸರನ್ನು ರದ್ದು ಮಾಡಿ ೩.೦೭ ಲಕ್ಷ ಮತದಾರರ ಹೆಸರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ರಾಜರಾಜೇಶ್ವರಿ ಕ್ಷೇತ್ರದಲ್ಲಿ ಒಟ್ಟು ೩೩೦೦೯ ಮತದಾರರ ಹೆಸರು ಡಿಲಿಟ್ ಮಾಡಲಾಗಿದೆ. ಆರ್‌ಆರ್ ನಗರ ಕ್ಷೇತ್ರದಲ್ಲಿ ಕೊಳಗೇರಿ ನಿವಾಸಿಗಳು ಮುಸ್ಲಿಂ ಮತದಾರರ ಹೆಸರುಗಳನ್ನು ಡಿಲಿಟ್ ಮಾಡಲಾಗಿದೆ ಎಂದು ದೂರಿದ್ದಾರೆ. ಹಾಗೆಯೇ, ಹೆಬ್ಬಾಳ ಕ್ಷೇತ್ರದಲ್ಲೂ ನೂರಾರು ಮತದಾರರ ಹೆಸರನ್ನು ಡಿಲಿಟ್ ಮಾಡಿದ ಆರೋಪಗಳನ್ನು ಕಾಂಗ್ರೆಸ್ ನಾಯಕರುಗಳು ಮಾಡಿದ್ದಾರೆ.
ಮತದಾರರ ಮಾಹಿತಿಗೆ ಕನ್ನ ಹಾಕಿರುವ ಈ ಹಗರಣ ಬೃಹತ್ ಹಗರಣವಾಗಿ ರೂಪುಗೊಂಡಿದ್ದು, ಸಮಗ್ರ ತನಿಖೆ ನಂತರವೇ ಸತ್ಯಾಂಶಗಳು ಹೊರ ಬರಲಿದ್ದು, ಪೊಲೀಸರು ತನಿಖೆಯನ್ನು ಬಿರುಸುಗೊಳಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ದೂರು’
ಖಾಸಗಿ ಸಂಸ್ಥೆಯೊಂದು ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿ ಮತಪಟ್ಟಿಗೆ ಕನ್ನ ಹಾಕಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಇಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಇಂದು ರಾಜ್ಯಚುನಾವಣಾ ಆಯುಕ್ತರ ಕಚೇರಿಗೆ ತೆರಳಿ ಮತದಾರರ ಮಾಹಿತಿಗೆ ಕನ್ನ ಹಾಕಿರುವ ಬಗ್ಗೆ ದೂರು ನೀಡಿದರು.