೬೦೯೩ ಮಂದಿಗೆ ಸೋಂಕು

ನವದೆಹಲಿ,ಸೆ.೯-ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಏರಿಳಿತ ಕಾಣುವ ಮೂಲಕ ಹಾವು – ಏಣಿ ಆಟಆಡುತ್ತಿದೆ. ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಹೊಸದಾಗಿ ೬,೦೯೩ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ೬,೭೬೮ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಸೋಂಕು ನಿತ್ಯ ಏರಿಳಿತ ಹಿನ್ನೆಲೆಯಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ ೫೦ ಸಾವಿರಕ್ಕೂ ಒಳಗೆ ಕುಸಿದಿದ್ದು, ಸದ್ಯ ಈ ಸಂಖ್ಯೆ ೪೯,೬೩೬ ಮಂದಿಯಲ್ಲಿ ಇದ್ದು, ಒಟ್ಟಾರೆ ಸರಾಸರಿ ಪ್ರಮಾಣ ಶೇ.೦.೧೧ ರಷ್ಟಿದೆ ಎಂದು ತಿಳಿಸಿದೆ. ಕೊರೊನಾ ಸೋಂಕಿನ ದಿನದ ಪಾಸಿಟಿವಿಟಿ ಪ್ರಮಾಣ ಶೇ.೧.೯೩ ರಷ್ಟಿದ್ದು, ವಾರದ ಸರಾಸರಿ ಪ್ರಮಾಣ ಶೇ.೧.೮೮ ರಷ್ಟಿದೆ. ಅಲ್ಲದೆ ಸೋಂಕಿನ ನಿತ್ಯ ಏರಿಳಿತ ಹಿನ್ನೆಲೆಯಲ್ಲಿ ಚೇತರಿಕೆಯ ಒಟ್ಟು ಪ್ರಮಾಣ ಶೇ.೯೮.೭ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಹೊಸದಾಗಿ ಚೇತರಿಸಿಕೊಂಡವರ ಸಂಖ್ಯೆ ಸೇರಿದಂತೆ, ಇಲ್ಲಿಯವರೆಗೂ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ ೪,೩೯,೦೬,೯೭೨ ಮಂದಿಗೆ ಹೆಚ್ಚಳವಾಗಿದೆ.
ದೇಶದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೮,೦೯,೧೮೯ ಡೋಸ್ ಲಸಿಕೆ ನೀಡಲಾಗಿದ್ದು, ಇದುವರೆಗೂ ೨೧೪.೫೫ ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದೇ ಅವಧಿಯಲ್ಲಿ ೩,೧೬,೫೦೪ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು, ಇಲ್ಲಿಯವರೆಗೆ ೮೮.೮೭ ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ಸಚಿವಾಲಯ ತನ್ನ ಅಧಿಕೃತ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.