ಮಳೆ, ಕೆಸರಲ್ಲಿ ರೈತರ ಹೋರಾಟ

ನವದೆಹಲಿ, ಜ.೬- ನೂತನ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಕಳೆದ ೪೨ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಸುರಿವ ಮಳೆ, ಕೆಸರನ್ನೂ ಲೆಕ್ಕಿಸದೆ ಹೋರಾಟ ತೀವ್ರಗೊಳಿಸಿದ್ದಾರೆ. ಸಿಂಗು ಗಡಿಯಲ್ಲಿ ರೈತರು ಸುರಿವ ಮಳೆಯಲ್ಲಿ ಹೋರಾಟವನ್ನು ಮುಂದುವರಿಸಿದ್ದು ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವ ತನಕ ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ರಸ್ತೆಯಲ್ಲೇ ಟೆಂಟುಗಳನ್ನು ಹಾಕಿಕೊಂಡು ರೈತರು ಪ್ರತಿಭಟನೆ ನಡೆಸುತ್ತಿದ್ದು, ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಕೆಸರು ತುಂಬಿ ತುಳುಕಾಡುತ್ತಿದೆ. ಅದರ ನಡುವೆಯೇ ರೈತರು ಹೋರಾಟ ಮುಂದುವರಿಸಿದ್ದಾರೆ.
ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಕೂರಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ರೈತರು ಅದನ್ನು ತೆರವು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಳೆಯಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಮೇಲೆ ಹಾಕಿಕೊಂಡಿದ್ದ ಟಾರ್ಪಲ್‌ಗಳು ಸಂಪೂರ್ಣವಾಗಿ ಕೆಸರುಮಯವಾಗಿದೆ, ಅದನ್ನು ಶುಚಿಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ್‌ಗಳನ್ನು ಗಡಿಯಲ್ಲಿ ತಂದು ನಿಲ್ಲಿಸಿಕೊಂಡು ಹೋರಾಟ ನಡೆಸುತ್ತಿರುವ ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮತ್ತೆ ಕೆಲವು ರೈತರು ರಸ್ತೆಬದಿಯಲ್ಲಿ ಟೆಂಟ್ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದು, ಅವರ ಪಾಡು ಹೇಳತೀರದಾಗಿದೆ.
ರೈತರು ಹಗಲಿರುಳೂ ಹೋರಾಟ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರ, ರೈತರ ಬೇಡಿಕೆಗಳನ್ನು ಈಡೇರಿಸಲು ಮೀನಾಮೇಷ ಎಣಿಸುತ್ತಿದೆ. ಇದನ್ನು ಅನ್ನದಾತರು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.