೫ ವರ್ಷ ದಾಖಲೆ ಇಲ್ಲದೆ ಓಡಾಡಿದ ಜೀಪು: ದಂಡ ಸಹಿತ ರೂ.೨೬ ಸಾವಿರ ಕಟ್ಟಿದ ಚಾಲಕ

ಪುತ್ತೂರು, ನ.೧- ಕಳೆದ ೫ ವರ್ಷಗಳಿಂದ ಸಮರ್ಪಕವಾದ ದಾಖಲೆಗಳೇ ಇಲ್ಲದೆ ಓಡಾಡುತ್ತಿದ್ದ ಟೂರಿಸ್ಟ್ ಜೀಪೊಂದಕ್ಕೆ ಪುತ್ತೂರು ನ್ಯಾಯಾಲಯ ರೂ. ೧೪ ಸಾವಿರ ದಂಡ ವಿಧಿಸಿದೆ. ಪುತ್ತೂರು ಪ್ರಾದೇಶಿಕ ಸಾರಿಗೆ ಕಚೇರಿ ರೂ. ೧೨೮೭೬ ತೆರಿಗೆ ಕಟ್ಟಿಸಿಕೊಳ್ಳುವ ಮೂಲಕ ಚಾಲಕ ತನ್ನ ತಪ್ಪಿಗಾಗಿ ರೂ.೨೬೮೭೬ ಹಣವನ್ನು ಕಟ್ಟಿರುವ ಘಟನೆ ನಡೆದಿದೆ.

ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ ಅವರು ಅ.೧೫ ರಂದು ಉಪ್ಪಿನಂಗಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಟೂರಿಸ್ಟ್ ಜೀಪು (ಕೆ. ಎ ೨೧ – ೩೧೦೯) ನಲ್ಲಿ ಚಾಲಕನ ಚಾಲನಾ ಪರವಾಣಿಗೆ ಹೊರತು ಜೀಪಿನ ಎಪ್.ಸಿ, ಇನ್ಸೂರೆನ್ಸ್, ಹೊಗೆ ತಪಾಸಣೆ ಪ್ರಮಾಣ ಪತ್ರ ಲ್ಯಾಪ್ಸ್ ಆಗಿರುವುದು ಬೆಳಕಿಗೆ ಬಂದಿತ್ತು. ಜೀಪು ಮಾಲಕ ಹಿರ್ತಡ್ಕ ನಿವಾಸಿಯ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆರೋಪಿಗೆ ರೂ.೧೪ ಸಾವಿರ ದಂಡ ವಿಧಿಸಿದೆ.  ಪ್ರಾದೇಶಿಕ ಸಾರಿಗೆ ಇಲಾಖೆ ಜೀಪಿನ ಬಾಕಿ ತೆರಿಗೆ ರೂ.೧೨,೮೭೬ ಜೀಪು ಚಾಲಕನಿಂದ ಕಟ್ಟಿಸಿಕೊಂಡಿದೆ. ಪೊಲೀಸರು ವಶಕ್ಕೆ ಪಡಿಸಿಕೊಂಡ ಜೀಪು ೨೦೧೬ರಿಂದ ಜೀಪಿನ ಎಫ್‌ಸಿ, ಇನ್ಸೂರೆನ್ಸ್, ಹೊಗೆ ತಪಾಸಣೆ ಪ್ರಮಾಣ ಪತ್ರ ಲ್ಯಾಪ್ಸ್ ಆಗಿತ್ತು. ಈ ಎಲ್ಲಾ ದಾಖಲೆಗಳು ಇಲ್ಲದೆ ಕಳೆದ ೫ ವರ್ಷದಿಂದ ಉಪ್ಪಿನಂಗಡಿಯಲ್ಲಿ ಓಡಾಡುತ್ತಿತ್ತು. ಇಂತಹ ಅನೇಕ ವಾಹನಗಳು ಇನ್ನೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿವೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.