೫ ವರ್ಷದಲ್ಲಿ ಸಿಬಿಐನಿಂದ ೧೩೫ ಪ್ರಕರಣ ದಾಖಲು

ನವದೆಹಲಿ,ಆ.೪- ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ವಿವಿಧ ನಾಗರಿಕ ಸೇವಾ ಅಧಿಕಾರಿಗಳ ವಿರುದ್ಧ ಕೇಂದ್ರ ತನಿಖಾ ತಂಡ-ಸಿಬಿಐ ೧೩೫ ಪ್ರಕರಣ ದಾಖಲಿಸಿದೆ ಎಂದು ಕೇಂದ್ರ ಸಿಬ್ಬಂಧಿ ಮತ್ತು ಕುಂದುಕೊರತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
೨೦೧೮-೨೦೨೨ ರಿಂದ ಈ ವರ್ಷ ಜೂನ್ ೩೦ ರವರೆಗಿನ ಅವಧಿಯಲ್ಲಿ ೧೩೫ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ರಾಜ್ಯಸಭೆಗೆ ನೀಡಿದ ಲಿಖಿತ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
೫ ವರ್ಷದಲ್ಲಿ ದಾಖಲಾಗಿರುವ ೧೩೫ ಪ್ರಕರಣಗಳಲ್ಲಿ ೫೭ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ವಿಚಾರಣೆಗಾಗಿ ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ಸಲ್ಲಿಸಲಾಗಿದೆ . ಕಳೆದ ಐದು ವರ್ಷಗಳಲ್ಲಿ ಕೇಂದ್ರ ಜಾಗೃತ ಆಯೋಗ ಮೊದಲ ಹಂತದ ಸಲಹೆಯ ಸಮಯದಲ್ಲಿ ೧೨,೭೫೬ ಅಧಿಕಾರಿಗಳ ವಿರುದ್ಧ ಮತ್ತು ಎರಡನೇ ಹಂತದ ಸಲಹೆಯ ಸಮಯದಲ್ಲಿ ೮೮೭ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ.
“ಇದರಲ್ಲಿ, ೭೧೯ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಮಂಜೂರು ಮಾಡಲು ಸಲಹೆ ನೀಡಲಾಗಿದೆ”.ನಾಗರಿಕ ಸೇವಾ ಅಧಿಕಾರಿಗಳ ವಿರುದ್ಧ ಮಹಾರಾಷ್ಟ್ರದಲ್ಲಿ ೨೪ ಪ್ರಕರಣಗಳು ದಾಖಲಾಗಿದ್ದು, ದೆಹಲಿಯಲ್ಲಿ ೧೫ ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ನಾಗರಿಕ ಸೇವಾ ಅಧಿಕಾರಿಗಳ ವಿರುದ್ಧ ಹತ್ತು ಪ್ರಕರಣಗಳನ್ನು ದಾಖಲಿಸಲಾಗಿದೆ.ಪಶ್ಚಿಮ ಬಂಗಾಳ, ಕೇರಳ, ಮೇಘಾಲಯ ಮತ್ತು ಆಂಧ್ರಪ್ರದೇಶದಲ್ಲಿ ತಲಾ ಒಂದು ಪ್ರಕರಣದೊಂದಿಗೆ ಕಡಿಮೆ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.