೫ ವಂದೇ ಭಾರತ್ ರೈಲು ಲೋಕಾರ್ಪಣೆ

ಬೆಂಗಳೂರು-ಧಾರವಾಡಕ್ಕೂ ಸೇವೆ
ಭೋಪಾಲ್, ಜೂ.೨೭- ಕರ್ನಾಟಕದ ಧಾರವಾಡ- ಬೆಂಗಳೂರ ನಡುವಿನ ವೇಗದ ರೈಲು “ವಂದೇ ಭಾರತ್” ಎಕ್ಸ್ ಪ್ರೆಸ್ ರೈಲು ಸೇರಿದಂತೆ ಮಧ್ಯಪ್ರದೇಶ, ಗೋವಾ ,ಸೇರಿದಂತೆ ವಿವಿಧ ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ೫ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಚಾಲನೆ ನೀಡುವ ಮೂಲಕ ದೇಶದಲ್ಲಿ ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದ್ದಾರೆ.ಭೋಪಾಲ್‌ನ ರಾಣಿ ಕಮಲಪತಿ ರೈಲು ನಿಲ್ದಾಣದಿಂದ ಭೋಪಾಲ್ -ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್, ಭೋಪಾಲ್ -ಜಬಲ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್, ರಾಂಚಿ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್; ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಗೋವಾದ ಮಡ್ಗಾಂವ್-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಚಾಲನೆ ನೀಡುತ್ತಿದ್ದಂತೆ ಧಾರವಾಡದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಜಾರ್ಖಂಡ್, ಗೋವಾದಿಂದ ವಿವಿಧ ಕೇಂದ್ರ ಸಚಿವರು ಖುದ್ದು ತಮ್ಮ ರಾಜ್ಯಗಳಿಂದ ವಂದೇ ಭಾರತ್ ರೈಲುಗೆ ಚಾಲನೆ ನೀಡಿದರು.
ದೇಶದಲ್ಲಿ ಐದು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭದಿಂದ ದೇಶದ ವಿವಿಧ ಪ್ರವಾಸಿತಾಣಗಳನ್ನು ಸಂಪರ್ಕಿಸಲು ಸಹಕಾರಿಯಾಗಲಿದೆ.
ಭೋಪಾಲ್ ನ ರಾಣಿ ಕಮಲಾಪತಿ-ಜಬಲ್‌ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಮಹಾಕೌಶಲ್ ಪ್ರದೇಶವನ್ನು (ಜಬಲ್‌ಪುರ) ಸಂಪರ್ಕಿಸುತ್ತದೆ. ವಿಹಾರ ಸ್ಥಳಗಳಾದ ಭೇರಘಾಟ್, ಪಚ್ಮರ್ಹಿ, ಸಾತ್ಪುರ ಮತ್ತು ಮುಂತಾದ ಪ್ರದೇಶಕ್ಕೆ ತೆರಳುವ ಮಂದಿಗೆ ಸಹಕಾರಿಯಾಗಲಿದೆ.ಭೋಪಾಲ್-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಮಾಲ್ವಾ ಪ್ರದೇಶ ಮತ್ತು ಬುಂದೇಲ್‌ಖಂಡ್ ಪ್ರದೇಶ ತಲುಪಲಿದ್ದು ಮಹಾಕಾಳೇಶ್ವರ, ಮಾಂಡು, ಮಹೇಶ್ವರ, ಖಜುರಾಹೊ ಮತ್ತು ಪನ್ನಾದಂತಹ ಮಹತ್ವದ ವಿಹಾರ ಸ್ಥಳಗಳಿಗೆ ತಲುಪಲಿದೆ.ಮಡಗಾಂವ್ (ಗೋವಾ)- ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ಗೋವಾದ ಅತ್ಯಂತ ಸ್ಮರಣೀಯ ವಂದೇ ಭಾರತ್ ಎಕ್ಸ್‌ಪ್ರೆಸ್ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಎಂಡ್ ಮತ್ತು ಗೋವಾದ ಮಡಗಾಂವ್ ನಿಲ್ದಾಣದ ನಡುವೆ ಚಲಿಸುತ್ತದೆ.ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಕರ್ನಾಟಕದ ಪ್ರಮುಖ ನಗರ ಪ್ರದೇಶಗಳನ್ನು-ಧಾರವಾಡ, ಹುಬ್ಬಳ್ಳಿ ಮತ್ತು ದಾವಣಗೆರೆ-ರಾಜ್ಯ ರಾಜಧಾನಿ ಬೆಂಗಳೂರಿನೊಂದಿಗೆ ಸಂಪರ್ಕಕ್ಕೆ ಸಹಕಾರಿಯಾಗಲಿದೆ. ರೈಲು ಆರಂಭದಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಸಹಕಾರಿಯಾಗಲಿದೆ.ಹಟಿಯಾ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ ಜಾರ್ಖಂಡ್ ಮತ್ತು ಬಿಹಾರದ ಮೊದಲ ವಂದೇ ಭಾರತ್ ರೈಲು ಇದಾಗಿದೆ. ಪಾಟ್ನಾ ಮತ್ತು ರಾಂಚಿ ನಡುವೆ ಸಂಪರ್ಕ ಕಲ್ಪಿಸಲಿದೆ, ಈ ರೈಲು ಪ್ರೇಕ್ಷಣೀಯ ಸ್ಥಳಗಳು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ನೆರವಾಗಲಿದೆ.ಭೋಪಾಲ್ ನಲ್ಲಿ ರಾಜ್ಯಪಾಲ ಮಂಗುಬಾಯಿ ಸಿ ಪಟೇಲ್,ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್, ಜ್ಯೋತಿರಾಧಿತ್ಯ ಸಿಂಧಿಯಾ ಮದ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ಪ್ರಧಾನಿ ಸಂವಾದ
ಮಧ್ಯಪ್ರದೇಶದ ಭೋಪಾಲ್‌ನ ರಾಣಿ ಕಮಲಪತಿ ರೈಲು ನಿಲ್ದಾಣದಲ್ಲಿ ಐದು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನಿಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಮಧ್ಯಾಹ್ನ ರಕ್ತಹೀನತೆ ನಿರ್ಮೂಲನಾ ಅಭಿಯಾನಕ್ಕೆ ಪ್ರಧಾನಿ ಚಾಲನೆ ನೀಡಲಿದ್ದು ೨೦೪೭ರ ವೇಳೆಗೆ ರಕ್ತಹೀನತೆ ಮುಕ್ತವಾಗಿಸುವ ಪಣತೊಟ್ಟಿದ್ದಾರೆ.