೫ ಲಕ್ಷ ಹಣಕ್ಕಾಗಿ ಮೃಗೀಯ ಅತ್ಯಾಚಾರ


ಬೆಂಗಳೂರು,ಮೇ.೩೧-ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಲು ಮುಂಗಡವಾಗಿ ಪಡೆದಿದ್ದ ೫ ಲಕ್ಷ ಹಣವನ್ನು ವಾಪಸ್ ನೀಡದಿದ್ದರಿಂದ ಬಾಂಗ್ಲಾದೇಶ ಮೂಲದ ಯುವತಿಯ ಗುಪ್ತಾಂಗದೊಳಗೆ ಮದ್ಯದ ಬಾಟಲಿ ಹಾಗೂ ಕಾಲ್ಬೆರಳು ತುರುಕಿ ಮೃಗೀಯವಾಗಿ ವರ್ತಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವುದನ್ನು ಆರೋಪಿಗಳು ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳಿಗೆ ೨೪ ವರ್ಷದ ಸಂತ್ರಸ್ತೆಯು ೫ ಲಕ್ಷ ರೂಗಳನ್ನು ನೀಡಬೇಕಾಗಿತ್ತು, ಆದರೆ ಹಣ ನೀಡಲು ಆಕೆ ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಮೃಗೀಯವಾಗಿ ವರ್ತಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವುದು ಪತ್ತೆಯಾಗಿದೆ.ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು ಸಂತ್ರಸ್ತ ಮಹಿಳೆಯು ಕೂಡ ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದಾಳೆ ಎನ್ನುವುದು ಖಚಿತವಾಗಿದೆ, ಆರೋಪಿಗಳಿಂದ ಆಕೆ ಮುಂಗಡವಾಗಿ ೫ ಲಕ್ಷ ರು ಹಣ ಪಡೆದಿದ್ದಾಳೆ.
ಆದರೆ ಕಳೆದ ಕೆಲವು ತಿಂಗಳಿಂದ ಆಕೆ ಹಣ ವಾಪಸ್ ಮಾಡಿರಲಿಲ್ಲ. ಹಣ ನೀಡುವಂತೆ ಹಲವು ಬಾರಿ ವಿನಂತಿಸಿ ಒತ್ತಾಯಿಸಿದರೂ ಆಕೆ ಹಣ ನೀಡಲು ನಿರಾಕರಿಸಿ ತಪ್ಪಿಸಿಕೊಂಡಿದ್ದಳು.
ತಪ್ಪಿಸಿಕೊಂಡಿದ್ದ ಸಂತ್ರಸ್ತೆಯನ್ನು ನಸರತ್ ಮತ್ತು ಕಾಜಲ್ ಎಂಬ ಇಬ್ಬರು ಮಹಿಳೆಯರು ಪತ್ತೆ ಹಚ್ಚಿದ್ದರು, ಅವರಿಬ್ಬರು ಕೂಡ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಒಬ್ಬಳು ವಿಡಿಯೋ ರೆಕಾರ್ಡ್ ಮಾಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಆರ್‌ಪಿಸಿ ಸೆಕ್ಷನ್ ೧೬೪ ರ ಅಡಿಯಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಇಂದು ಮಧ್ಯಾಹ್ನ ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆಯನ್ನು ಹಾಜರುಪಡಿಸಲಿದ್ದಾರೆ. ಪ್ರಕರಣದ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ. ನಾಲ್ಕು ದಿನಗಳ ಹಿಂದೆ, ಅಸ್ಸಾಂನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮೃಗೀಯ ಅತ್ಯಾಚಾರದ ವಿಡಿಯೋ ಬೆಳಕಿಗೆ ಬಂದ ನಂತರ ಇಬ್ಬರು ಮಹಿಳೆಯರು ಸೇರಿದಂತೆ ಏಳು ಬಾಂಗ್ಲಾದೇಶಿಗಳ ತಂಡವನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಒಂದು ದಿನದ ನಂತರ, ಇಬ್ಬರು ಆರೋಪಿಗಳು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ನಗರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದರು.