೫ ರಾಜ್ಯಗಳ ವಿಧಾನಸಭೆ ಚುನಾವಣೆ ಬಿಜೆಪಿ ೩೪೪ ಕೋಟಿ ರೂ. ವೆಚ್ಚ

ನವದೆಹಲಿ,ಸೆ.೨೨- ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ್ ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ೩೪೪.೨೭ ಕೋಟಿ ರೂ. ವೆಚ್ಚ ಮಾಡಿದೆ. ಇದು ೫ ವರ್ಷಗಳ ಹಿಂದೆ ಇದೇ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ೨೧೮.೨೬ ಕೋಟಿ ವೆಚ್ಚ ಮಾಡಲಾಗಿತ್ತು. ಈ ಬಾರಿ ಶೇ. ೫೮ರಷ್ಟು ಹೆಚ್ಚಳ ಮಾಡಲಾಗಿದೆ.
ಈ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ಖರ್ಚು-ವೆಚ್ಚಗಳ ಕುರಿತು ವರದಿ ಸಲ್ಲಿಸಲಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಕೂಡ ಹಣಕಾಸು ಖರ್ಚು-ವೆಚ್ಚದಲ್ಲಿ ಹಿಂದೆ ಬಿದ್ದಿಲ್ಲ. ೫ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ೧೯೪.೮೦ ಕೋಟಿ ರೂ.ಗಳನ್ನು ವ್ಯಯ ಮಾಡಿದೆ.
೨೦೧೭ರಲ್ಲಿ ಈ ೫ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ೧೦೮.೧೪ ಕೋಟಿ ರೂ.ಗಳನ್ನು ವೆಚ್ಚ ಮಾಡಿತ್ತು. ಇದು ೨೦೨೨ರ ಚುನಾವಣೆಗೆ ಹೋಲಿಸಿದರೆ ಶೇ. ೮೦ ರಷ್ಟು ಅಧಿಕವಾಗಿದೆ.
೫ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಕನಿಷ್ಠ ೨೨೧.೩೨ ಕೋಟಿ ರೂ. ವೆಚ್ಚ ಮಾಡಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ೧೭೫.೧೦ ಕೋಟಿ ರೂ. ವೆಚ್ಚ ಮಾಡಿತ್ತು.ಹೀಗಾಗಿ ಈ ಬಾರಿ ಶೇ. ೨೬ ರಷ್ಟು ಹೆಚ್ಚು ವ್ಯಯ ಮಾಡಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.
ಗೋವಾ ಮತ್ತು ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆಯ ವೆಚ್ಚ ಗಣನೀಯ ಏರಿಕೆ ಕಂಡಿದೆ. ಪಂಜಾಬ್‌ನಲ್ಲಿ ೩೬.೭೦ ಕೋಟಿ ಬಿಜೆಪಿ ವೆಚ್ಚ ಮಾಡಿದ್ದರೆ, ಕಳೆದ ಬಾರಿ ೭.೪೩ ಕೋಟಿ ರೂ. ವೆಚ್ಚ ಮಾಡಿತ್ತು. ಅಂದರೆ ಈ ಬಾರಿಯ ಒಟ್ಟು ವೆಚ್ಚ ಐದು ಪಟ್ಟಾಗಿದೆ. ಆದರೂ ಪಂಜಾಬ್‌ನಲ್ಲಿ ಬಿಜೆಪಿ ೨ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಅದೇ ರೀತಿ ಗೋವಾದಲ್ಲಿ ಈ ವರ್ಷ ೧೯.೦೭ ಕೋಟಿ ರೂ. ವೆಚ್ಚ ಮಾಡಿದ್ದರೆ, ೨೦೧೭ರಲ್ಲಿ ೪.೩೭ ಕೋಟಿ ವೆಚ್ಚ ಮಾಡಿತ್ತು. ಗೋವಾದಲ್ಲಿ ಒಟ್ಟಾರೆ ವೆಚ್ಚ ೪ ಪಟ್ಟು ಹೆಚ್ಚಾಗಿದೆ.
ಮಣಿಪುರ ಮತ್ತು ಉತ್ತರಾಖಂಡ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ೨೩.೫೨ ಕೋಟಿ ರೂ. ವೆಚ್ಚ ಮಾಡಿದೆ. ೫ ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೋವಾ, ಮಣಿಪುರ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ
ಅಧಿಕಾರಕ್ಕೆ ಬಂದಿದೆ.