
ನವದೆಹಲಿ,ಸೆ.೧೬- ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ “ಇಂಡಿಯಾ ಮೈತ್ರಿಕೂಟ” ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ವರ್ಷಾಂತ್ಯದಲ್ಲಿ ನಡೆಯಲಿರುವ ರಾಜಸ್ತಾನ, ಮದ್ಯಪ್ರದೇಶ, ಛತ್ತೀಸ್‌ಗಡ,ತೆಲಂಗಾಣ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪ್ರತಿ ಪಕ್ಷಪಕ್ಷಗಳ ಮೈತ್ರಿಕೂಟ ಒಗ್ಗೂಡಿ ಹೋರಾಟ ಮಾಡುತ್ತೇವೆ. ಈ ಮೂಲಕ ನಾವು ಗೆಲುವು ಸಾಧಿಸುತ್ತೇವೆ ಎನ್ನುವ ಆತ್ಮವಿಶ್ವಾಸ ಹೊರಹಾಕಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಸಮಯದಲ್ಲಿ ತವರು ರಾಜ್ಯ ಕರ್ನಾಟಕ ಮತ್ತು ಹಿಮಾಲಯದ ತಪ್ಪಲಿನ ರಾಜ್ಯ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿಸಂಸ್ಥೆಯೊಂದಿಗೆ ನೀಡಿದ ಸಂದರ್ಶನದಲ್ಲಿ ಅವರು ಮುಂಬರುವ ಐದು ರಾಜ್ಯಗಳಲ್ಲಿ ಗೆಲವು ಸಾಧಿಸುವುದಾಗಿ ಹೇಳಿದ್ದಾರೆ.ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಹಿರಿಯ ನಾಯಕ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ ಒಗ್ಗೂಡಿ ಹೋಗಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ ಮತ್ತು ನಾನು ರಾಜಸ್ತಾನದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇವೆ. ಇಬ್ಬರು ಮುಖಂಡನ್ನು ಒಟ್ಟಾಗಿ ಚುನಾವಣೆಗೆ ಹೋಗಲು ಸೂಚಿಸಿದ್ದೇವೆ. ಸಚಿನ್ ಪೈಲೆಟ್‌ಗೆ ಇನ್ನು ವಯಸ್ಸಿದೆ,ಭವಿಷ್ಯದಲ್ಲಿ ದೊಡ್ಡ ಸ್ಥಾನಕ್ಕೆ ಏರಲಿದ್ದಾರೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದ್ದಾರೆ
ನಾನೊಬ್ಬ ಸಾಮಾನ್ಯ ಕಾಂಗ್ರೆಸ್ ಸದಸ್ಯನಾಗಿ, ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ನಂತರ ಜಿಲ್ಲಾ ಘಟಕದ ಮುಖ್ಯಸ್ಥ, ನಂತರ ರಾಜ್ಯ ಘಟಕದ ಮುಖ್ಯಸ್ಥ, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ, ಈಗ ಅಧ್ಯಕ್ಷನಾಗಿದ್ದೇನೆ. ಆದ್ದರಿಂದ, ಇದು ನನಗೆ ಹೊಸದೇನೂ ಅಲ್ಲ. ದೀರ್ಘಕಾಲದವರೆಗೆ ವಿವಿಧ ಜನರ ಸಂಪರ್ಕಕ್ಕೆ ಬಂದಿದ್ದರಿಂದ,ಇದು ದಿನನಿತ್ಯದ ಕೆಲಸ ಎಂದು ನಾನು ಭಾವಿಸುತ್ತೇನೆ. ಪೂರೈಸಬೇಕಾದ ಕೆಲವು ದೊಡ್ಡ ಜವಾಬ್ದಾರಿಯನ್ನು ನನಗೆ ನೀಡಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನೆಡೆಯುವುದಾಗಿ ಅವರು ತಿಳಿಸಿದ್ದಾರೆ.
ಸರ್ವಾಧಿಕಾರಿ ಮೋದಿ:
ಪ್ರಧಾನಿ ನರೇಂದ್ರ ಮೋದಿ ಅವರು ಜನರೊಂದಿಗೆ ಅಥವಾ ಪಕ್ಷದ ವರಿಷ್ಠರೊಂದಿಗೆ ಚರ್ಚಿಸದೆ ನಿರ್ಧಾರ ತೆಗದುಕೊಳ್ಳುತ್ತಿದ್ದಾರೆ. ಇದು ಸರ್ವಾಧಿಕಾರದ ಧೋರಣೆ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ ವಿಶೇಷ ಅಧಿವೇಶನ ಕರೆಯುವ ಸಮಯದಲ್ಲಿಯೂ ವಿರೋಧ ಪಕ್ಷಗಳ ಯಾವುದೇ ನಾಯಕರೊಂದಿಗೆ ಚರ್ಚೆ ನಡೆಸದೆ ದಿನಾಂಕ ನಿಗದಿ ಮಾಡಿದ್ದಾರೆ. ಇಂತಹ ವರ್ತನೆಯನ್ನು ಏನೆಂದು ಕರೆಯುವುದು ಹೇಳಿ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಜಿ-೨೦ ಶೃಂಗಸಭೆಗೆ ಆಹ್ವಾನಿಸದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ವೈರಿ ಅಲ್ಲ
ನನ್ನ ವಿರುದ್ದ ಚುನಾವಣೆಗೆ ನಿಂತ ಮಾತ್ರಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರು ವೈರಿ ಅಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.ಜಿ-೨೩ ಸದಸ್ಯ ಗುಂಪಿನಲ್ಲಿದ್ದ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಮತ್ತು ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಒಟ್ಟಿಗೆ ಪಕ್ಷವನ್ನು ಮುನ್ನೆಡೆಸುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ