೫ ದಿನ ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆ: ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ

ಪಡುಬಿದ್ರೆ, ಜೂ.2- ಪಡುಬಿದ್ರೆ, ಬೆಳಪು, ಶಿರ್ವ ಗ್ರಾಮಗಳಲ್ಲಿ ನಾಳೆಯಿಂದ (ಜೂ.2) ಐದು ದಿನಗಳ ವರೆಗೆ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಂದು (ಮಂಗಳವಾರ) ಬೆಳಗ್ಗೆ ಭಾರೀ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಧಾವಿಸಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು.

50ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣಗಳಿರುವ ಗ್ರಾಮಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೋಮವಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಅದರಂತೆ ಪಡುಬಿದ್ರೆ, ಬೆಳಪು, ಶಿರ್ವ ಸೇರಿದಂತೆ ಉಡುಪಿ ಜಿಲ್ಲೆಯ ಒಟ್ಟು 35 ಗ್ರಾಮಗಳಲ್ಲಿ ಜೂ.2ರಿಂದ 6ರವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿಯಾಗಿಲಿದೆ. ಸೋಮವಾರ ಸಂಜೆಯ ವೇಳೆ ಈ ಆದೇಶ ಹೊರಡಿಸಿದ್ದರಿಂದ ಇಂದು ಒಂದು ದಿನ ಮಾತ್ರ ಜನರಿಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಾರ್ವಜನಿಕರು ಮಾರುಕಟ್ಟೆಗಳಲ್ಲಿ ಮುಗಿಬಿದ್ದು ಖರೀದಿಸುವ ದೃಶ್ಯಗಳು ಕಂಡುಬಂದವು. ಐದು ದಿನಗಳ ಸಂಪೂರ್ಣ ಲಾಕ್ಡೌನ್ ಘೋಷಣೆಯ ಬಗ್ಗೆ ತಿಳಿದಿದ್ದರೂ ಮಾರುಕಟ್ಟೆ ಪ್ರದೇಶದಲ್ಲಿ ಸುರಕ್ಷಿತ ಅಂತರ ಕಾಪಾಡಲು ಅಗತ್ಯವಾದ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಸ್ಥಳೀಯಾಡಳಿತ ಕೈಗೊಂಡಿಲ್ಲ. ಜನ ಕೋವಿಡ್ ಸೋಂಕನ್ನು ಮರೆತು ಪೊಲೀಸರ ಸಮ್ಮುಖದಲ್ಲೇ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ದೃಶ್ಯ ಪಡುಬಿದ್ರೆ ಪೇಟೆ, ಕಾರ್ಕಳ ಕಂಡುಂಬಂದವು. ಹೆದ್ದಾರಿ ಉದ್ದಕ್ಕೂ ವಾಹನ ನಿಲುಗಡೆಯಿಂದ ಸಂಚಾರಕ್ಕೂ ತೊಡಕು ಉಂಟಾಯಿತು.