
ನವದೆಹಲಿ,ಮೇ. ೧೪- ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರ ಆಡಳಿತ ನೀಡಲಿದೆ.ಚುನಾವಣೆ ಪ್ರಚಾರದ ಸಮಯದಲ್ಲಿ ಜನರಿಗೆ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇವೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ
ಅವರು ಭರವಸೆ ನೀಡಿದ್ದಾರೆ ಕರ್ನಾಟಕದಲ್ಲಿ ಕ್ರೋನಿ ಬಂಡವಾಳಶಾಹಿಗಳನ್ನು ಬಡವರು ಸೋಲಿಸಿದ್ದಾರೆ.ವಿಧಾನಸಭೆ ಚುನಾವಣೆಯಲ್ಲಿ ದ್ವೇಷ ಬಳಸಿಕೊಂಡು ಈ ಯುದ್ಧವ ಮಾಡಿಲ್ಲ.. ಪ್ರೀತಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದು ಪಕ್ಷಕ್ಕೆ ಅನುಕೂಲವಾಗಿದೆ ಎಂದಿದ್ದಾರೆ.ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೋಮು ಭಾವನೆ ಕೆರಳಿಸುವ ಮಂದಿಗೆ ಹಾಗು ಕ್ರೋನಿ ಬಂಡವಾಳಶಾಹಿಗಳನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ ಎಂದಿದ್ದಾರೆ.
ದಕ್ಷಿಣ ಭಾರತದ ಏಕೈಕ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಜನರು ಅಧಿಕಾರದಿಂದ ಕಿತ್ತೊಗೆದಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಪ್ರಚಾರದ ಸಮಯದಲ್ಲಿ ರಾಜ್ಯದ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲು ಪಕ್ಷ ಸಿದ್ಧವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ
ಮತದಾರರು ತಕ್ಕ ಪಾಠ:
ಅಭಿವೃದ್ಧಿ ಕೆಲಸಗಳಿಗಿಂತ ಹೆಚ್ಚಾಗಿ ಜನರನ್ನ ದಿಕ್ಕು ತಪ್ಪಿಸಿ ಮತ ಪಡೆಯಬಹುದು ಎನ್ನುವ ಬಿಜೆಪಿ ನಾಯಕರ ಪ್ರಯತ್ನಕ್ಕೆ ಮತದಾರ ತಕ್ಕ ಪಾಠ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಜನರು ನೀಡಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜನರ ಸೇವೆ ಮಾಡಲು ತಮ್ಮ ಸಮಯ ಮೀಸಲು ಇರುವುದಾಗಿ ಅವರು ತಿಳಿಸಿದ್ದಾರೆ.