5 ಗ್ಯಾರಂಟಿಗೆ ಸಂಪುಟ ಅಸ್ತು

ಬೆಂಗಳೂರು,ಜೂ.೨:ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷ ನೀಡಿದ್ದ ೫ ಗ್ಯಾರಂಟಿಗಳ ಭರವಸೆಯನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಾರಿಗೆ ತರಲು ಇಂದು ನಡೆದ ಸುದೀರ್ಫ ಸಂಪುಟ ಟಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅದರಂತೆ ಪ್ರತಿ ಮನೆಗೆ ೨೦೦ ಯುನಿಟ್ ಉಚಿತ ವಿದ್ಯುತ್ ಕಲ್ಪಿಸಲು ತೀರ್ಮಾನಿಸಿದ್ದು, ಆ. ೧೫ ರಂದು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ಪ್ರತಿ ಮಹಿಳೆಯರ ಖಾತೆಗೆ ೨ ಸಾವಿರ ರೂ. ಜಮೆ ಮಾಡಲು ಅನುಮೋದನೆ ನೀಡಲಾಗಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅಧ್ಯಕ್ಷತೆಯಲ್ಲಿ ನಡೆದ ೫ ತಾಸುಗಳ ಕಾಲ ನಡೆದ ಸಚಿವ ಸಂಪುಟ ಸಭೆಯಲ್ಲಿ ಚುನಾವಣೆಯಲ್ಲಿ ಘೋಷಿಸಲಾಗಿದ್ದ ಎಲ್ಲ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಯಾವುದೇ ಜಾತಿ, ಧರ್ಮ,ಭಾಷೆಗೆ ಅವಕಾಶ ನೀಡದೆ ರಾಜ್ಯದ ಎಲ್ಲ ಜನತೆಗೆ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಎಲ್ಲರಿಗೂ ತಿಂಗಳಿಗೆ ೨೦೦ ಯುನಿಟ್ ವಿದ್ಯುತ್‌ವರೆಗೆ ಉಚಿತವಾಗಿ ನೀಡಲಾಗುವುದು, ಒಂದು ವರ್ಷದಲ್ಲಿ ಪ್ರತಿ ಮನೆಯಿಂದ ವಿದ್ಯುತ್ ಖರ್ಚು ಮಾಡಿರುವ ಸರಾಸರಿ ಮಾಹಿತಿಯನ್ನಾಧರಿಸಿ ಅದರ ಮೇಲೆ ಶೇ. ೧೦ ರಷ್ಟು ದರ
ವಿಧಿಸಲಾಗುವುದು. ಇದುವರೆಗಿನ ಬಾಕಿ ಇರುವ ವಿದ್ಯುತ್ ಬಿಲ್‌ನ್ನು ಜನರೇ ಪಾವತಿಸಬೇಕು ಎಂದು ಹೇಳಿದರು.ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಆ. ೧ ರಿಂದ ಮಹಿಳೆಯರಖಾತಗೆ ಹಣ ಜಮೆ ಮಾಡುವ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ಮಾಡಲಾಗುವುದು ಎಂದರು.ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಈ ಗೃಹಲಕ್ಷ್ಮಿ ಯೋಜನೆ ಅನ್ವಯವಾಗಲಿದೆ.ಈ ಹಣವನ್ನು ಮನೆಯ ಯಜಮಾನಿಗೆ ಪ್ರತಿ ತಿಂಗಳು ೨ ಸಾವಿರ ರೂ.ಗಳನ್ನು ಜಮೆ ಮಾಡುತ್ತೇವೆ. ಇದಕ್ಕಾಗಿ ಪ್ರತಿ ಮಹಿಳೆಯರು ಆಧಾರ್‌ಕಾರ್ಡ್, ಬ್ಯಾಂಕ್ ಖಾತೆಗಳ ವಿವರವನ್ನುನೀಡಬೇಕು. ಆನ್‌ಲೈನ್ ಮೂಲಕ ಜೂ.೧೫ ರಿಂದ ಜು. ೧೫ರವರೆಗೆ ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಆ. ೧೫ ಸ್ವಾತಂತ್ರ್ಯ ದಿನಾಚರಣೆಯಂದು ಮಹಿಳೆಯರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಹೇಳಿದರು. ಪಿಂಚಣಿ ಫಲಾನುಭವಿಗಳಿಗೂ ಈ ಗೃಹಲಕ್ಷ್ಮಿ ಯೋಜನೆ ಅನ್ವಯವಾಗಲಿದೆ.ಜು. ೧ನೇ ತಾರೀಖಿನಿಂದ ಎಲ್ಲ ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆಯಡಿ ಆಹಾರಧಾನ್ಯ ಕೊಡುತ್ತೇವೆ. ಅಂತ್ಯೋದಯ ಕಾರ್ಡುದಾರರಿಗೆ ಬರುವ ಜನರಿಗೂ ಈ ಅನ್ನಭಾಗ್ಯ ಯೋಜನೆ ಅನ್ವಯವಾಗಲಿದೆ. ಈಗ ೧೦ ಕೆಜಿ ಅಕ್ಕಿ ಕೊಡುವಷ್ಟು ಶೇಖರಣೆಯಾಗಿಲ್ಲ. ಹೀಗಾಗಿ,ಜು. ೧ ರಿಂದ ಜಾರಿಗೆ ತರುವುದಾಗಿ ಹೇಳಿದರು.೪ನೇ ಗ್ಯಾರಂಟಿಯಾದ ಶಕ್ತಿ ಸಮಾಜದ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲ ಮಹಿಳೆಯರಿಗೆ ಯಾವುದೇ ಸ್ಥಾನಮಾನವಿಲ್ಲದೆ ಉಚಿತ ಬಸ್‌ಪಾಸ್ ಯೋಜನೆಯನ್ನು ಜಾರಿಗೆ ತರಲಾಗುವುದು ರಾಜ್ಯದ ಒಳಗಡೆ ಉಚಿತವಾಗಿ ಸಂಚರಿಸಬಹುದು. ರಾಜಹಂಸ ಏಸಿ ಎಕ್ಸ್‌ಪ್ರೆಸ್ ಬಸ್‌ಗಳನ್ನೊರತುಪಡಿಸಿ ಮಹಿಳೆಯರು ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಗ್ಯಾರಂಟಿ ಈ ತಿಂಗಳ ೧೧ನೇ ತಾರೀಖಿನಿಂದ ಜಾರಿಗೆ ಬರಲಿದೆ. ಉಚಿತ ಬಸ್ ಸೇವೆಗೆ ಯಾವುದೇ ಕಿ.ಮೀ.ಗೆ ಸೀಮಿತಗೊಳಿಸಿಲ್ಲ.
೫ನೇ ಗ್ಯಾರಂಟಿಯಾದ ಯುವನಿಧಿ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಪದವಿಪಡೆದು ೨೪ ತಿಂಗಳವರೆಗೆ ನಿರುದ್ಯೋಗದಲ್ಲಿರುವ ಯುವಕರಿಗೆ ೩ ಸಾವಿರರೂ. ಪ್ರತಿ ತಿಂಗಳು ನೀಡಲಾಗುತ್ತದೆ. ಇದು ೨೦೨೨-೨೩ರಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ. ಬಿಎ, ಬಿಎಸ್ಸಿ, ಬಿಕಾಂ, ಎಕಾಂ ಸೇರಿದಂತೆ ಇತರ ವಿಷಯಗಳ ಪದವೀಧರರಿಗೆ ಯುವ ನಿಧಿ ಅನ್ವಯವಾಗಲಿದೆ. ಅದೇ ರೀತಿ ಡಿಪ್ಲೋಮೊ ಪದವೀಧರರಿಗೂ ಮಾಸಿಕ ೧,೫೦೦ ನಿರುದ್ಯೋಗಭತ್ಯೆಯನ್ನು ನೀಡಲಾಗುವುದು,