೫೬ ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ಅಸ್ತು

ನವದೆಹಲಿ,ಜು.೨೬- ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ನ್ಯಾಯಾಧೀಶ ಹುದ್ದೆಗೆ ಒಂದೇ ವಾರದಲ್ಲಿ ಎರಡು ಸಭೆ ನಡೆಸುವ ಮೂಲಕ ೫೬ ನ್ಯಾಯಾಧೀಶರ ನೇಮಕಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಸಮ್ಮತಿ ನೀಡಿದೆ.
ಒಂಬತ್ತು ಹೈಕೋರ್ಟ್‌ಗಳ ನ್ಯಾಯಾಧೀಶರಾಗಿ ನೇಮಕ ಮಾಡಲು ೩೬ ನ್ಯಾಯಾಂಗ ಅಧಿಕಾರಿಗಳು ಮತ್ತು ೨೦ ವಕೀಲರು ಸೇರಿದಂತೆ ೫೬ ಹೆಸರುಗಳಿಗೆ ಮುಖ್ಯನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಕೊಲಿಜಿಯಂ ಸಮ್ಮತಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅಧಿಕಾರಾವಧಿಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳಲು ಒಂದೇ ಸಭೆಯಲ್ಲಿ ಎರಡನೇ ಬಾರಿಗೆ ಅತಿ ಹೆಚ್ಚು ಹೆಸರುಗಳಿಗೆ ಅನುಮತಿ ನೀಡಲಾಗಿದೆ.
ಆಂಧ್ರಪ್ರದೇಶ ಮತ್ತು ಕರ್ನಾಟಕ ಹೈಕೋರ್ಟ್ ಕ್ರಮವಾಗಿ ಏಳು ವಕೀಲರು ಮತ್ತು ಐವರು ನ್ಯಾಯಾಂಗ ಅಧಿಕಾರಿಗಳನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ.
ಕಳೆದ ವರ್ಷ ಸೆಪ್ಟೆಂಬರ್ ೩ ರಂದು ನಡೆದ ನೇತೃತ್ವದ ತ್ರಿಸದಸ್ಯ ಕೊಲಿಜಿಯಂ ೧೨ ಹೈಕೋರ್ಟ್‌ಗಳ ನ್ಯಾಯಾಧೀಶರಾಗಿ ನೇಮಕ ಮಾಡಲು ೬೫ ವ್ಯಕ್ತಿಗಳ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ದಾಖಲೆ ಬರೆದಿತ್ತು.
ಇದೇ ೨೯ ರಂದು ನಿವೃತ್ತರಾಗಲಿರುವ ಮುಖ್ಯನ್ಯಾಯಮೂರ್ತಿ ಎನ್.ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಯು. ಯು. ಲಲಿತ್ ಮತ್ತು ಎ. ಎಂ. ಖಾನ್ವಿಲ್ಕರ್ ಅವರನ್ನೊಳಗೊಂಡ ಕೊಲಿಜಿಯಂ, ಪ್ರಸ್ತುತ ೧೫ ಹುದ್ದೆಗಳನ್ನು ಹೊಂದಿರುವ ತೆಲಂಗಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಆರು ವಕೀಲರ ಹೆಸರನ್ನು ಶಿಫಾರಸು ಮಾಡಿದೆ.
೩೮ ನ್ಯಾಯಾಧೀಶರ ಹುದ್ದೆಗಳು ಖಾಲಿ ಇರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕ ಮಾಡಲು ೧೩ ವಕೀಲರ ಹೆಸರನ್ನು ಶಿಫಾರಸು ಮಾಡಿದೆ.
ಕೊಲಿಜಿಯಂ ೨೬ ಖಾಲಿ ಹುದ್ದೆಗಳನ್ನು ಹೊಂದಿರುವ ಕೊಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕ ಮಾಡಲು ಒಂಭತ್ತು ನ್ಯಾಯಾಂಗ ಅಧಿಕಾರಿಗಳನ್ನು ಆಯ್ಕೆ ಮಾಡಿದೆ. ಗುವಾಹಟಿ ಹೈಕೋರ್ಟ್‌ನಲ್ಲಿ ಇಬ್ಬರು ನ್ಯಾಯಾಂಗ ಅಧಿಕಾರಿಗಳನ್ನು ನ್ಯಾಯಾಧೀಶರನ್ನಾಗಿ ನೇಮಿಸಲು ಶಿಫಾರಸು ಮಾಡುವುದರೊಂದಿಗೆ, ಅದು ೨೪ ನ್ಯಾಯಾಧೀಶರ ಪೂರ್ಣ ಬಲಕ್ಕೆ ಹೆಚ್ಚಲಿದೆ.
೧೧ ಹುದ್ದೆಗಳನ್ನು ಹೊಂದಿರುವ ಒರಿಸ್ಸಾ ಹೈಕೋರ್ಟ್‌ಗೆ ಕೊಲಿಜಿಯಂನ ಶಿಫಾರಸುಗಳನ್ನು ಅಂಗೀಕರಿಸಿದರೆ ಒಬ್ಬ ವಕೀಲರು ಮತ್ತು ಇಬ್ಬರು ನ್ಯಾಯಾಂಗ ಅಧಿಕಾರಿಗಳನ್ನು ನ್ಯಾಯಮೂರ್ತಿಗಳಾಗಿ ಆಯ್ಕೆಯಾಗಲಿದ್ದಾರೆ.
ಹಿಮಾಚಲ ಪ್ರದೇಶದ ಇಬ್ಬರು ನ್ಯಾಯಾಂಗ ಅಧಿಕಾರಿಗಳನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ ಮತ್ತು ಅವರನ್ನು ನೇಮಕ ಮಾಡಿದರೆ, ಹೈಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳು ಆರಕ್ಕೆ ಇಳಿಯಲಿದೆ.
೧,೧೦೦ ನ್ಯಾಯಾಧೀಶರ ಸಂಚಿತ ಬಲವನ್ನು ಹೊಂದಿರುವ ೨೫ ಹೈಕೋರ್ಟ್‌ಗಳಲ್ಲಿ ಜುಲೈ ೧ ರ ಹೊತ್ತಿಗೆ ಸುಮಾರು ೩೮೧ ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಶೇ.೫೦ರಷ್ಟು ಇದ್ದ ಖಾಲಿ ಹುದ್ದೆಯನ್ನು ಕಳೆದ ಒಂದೂವರೆ ವರ್ಷದಲ್ಲಿ ಶೇ.೩೪ಕ್ಕೆ ಇಳಿಸಲಾಗಿದೆ.
ಜುಲೈ ೨೦ ರಂದು ನಡೆದ ಕೊನೆಯ ಸಭೆಯಲ್ಲಿ, ಕೊಲಿಜಿಯಂ ಮೂರು ಹೈಕೋರ್ಟ್‌ಗಳ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ೨೧ ನ್ಯಾಯಾಂಗ ಅಧಿಕಾರಿಗಳ ಹೆಸರನ್ನು ಶಿಫಾರಸು ಮಾಡಿತ್ತು. ಅಲಹಾಬಾದ್ ಹೈಕೋರ್ಟ್‌ಗೆ ಶಿಫಾರಸು ಮಾಡಲಾದ ಏಳು ಹೆಸರುಗಳಲ್ಲಿ ಹಿಂದಿನ ಐದು ಹೆಸರು ಪುನರಾವರ್ತನೆಗೊಂಡಿದೆ.