೫೫ ಬ್ಲ್ಯಾಕ್ ಫಂಗಸ್ ಸೋಂಕಿತರ ಚಿಕಿತ್ಸೆ ಅತಂತ್ರ

ಅಡ್ಡಪರಿಣಾಮ : ೧೭೮ ಎಂಪೋಟೇರಿಸಿನ್ ಬಿ ಇಂಜಕ್ಷನ್ ಹಿಂದಕ್ಕೆ
ರಾಯಚೂರು.ಜೂ.೦೭- ಬ್ಲ್ಯಾಕ್ ಫಂಗಸ್ ಸೋಂಕಿತರ ಚಿಕಿತ್ಸೆ ಬಗ್ಗೆ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ ಒಂದಿಲ್ಲೊಂದು ಅವಘಡಗಳಿಗೆ ಕಾರಣವಾಗಿ, ನಿನ್ನೆ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಸೂಕ್ತವಲ್ಲದ ಇಂಜಕ್ಷನ್‌ಗಳನ್ನು ಜಿಲ್ಲೆಯಿಂದ ಪುನಃ ಬೆಂಗಳೂರಿಗೆ ಮರಳಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ರಿಮ್ಸ್ ಆಸ್ಪತ್ರೆಯಲ್ಲಿ ಒಟ್ಟು ೫೫ ಬ್ಲ್ಯಾಕ್ ಫಂಗಸ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಎಂಪೋಟೇರಿಸಿನ್ ಬಿ ಇಂಜಕ್ಷನ್ ತೀವ್ರ ಬೇಡಿಕೆ ಇದೆ. ಜಿಲ್ಲೆಗೆ ಸರಿಯಾದ ಪ್ರಮಾಣದಲ್ಲಿ ಇಂಜಕ್ಷನ್ ಪೂರೈಕೆಯಾಗದಿರುವುದರಿಂದ ಅಲ್ಲಿಯ ಸೋಂಕಿತರ ಪರಿಸ್ಥಿತಿ ಅತ್ಯಂತ ದಾರುಣವಾಗಿದೆ. ಆದರೆ, ನಿನ್ನೆ ೧೭೮ ಇಂಜಕ್ಷನ್‌ಗಳು ಜಿಲ್ಲೆಗೆ ಒದಗಿಸಲಾಗಿತ್ತು. ದುರಂತವೆಂದರೇ, ಈ ಇಂಜಕ್ಷನ್ ಪಡೆದ ಸೋಂಕಿತರು ಅಲರ್ಜಿಯಂತಹ ಅಡ್ಡಪರಿಣಾಮಗಳ ಹಿನ್ನೆಲೆಯಲ್ಲಿ ಇವುಗಳನ್ನು ಮರಳಿ ಕಳುಹಿಸಲಾಗಿದೆಂದು ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ.
ಎಂಪೋಟೇರಿಸಿನ್ ಬಿ ಇಂಜಕ್ಷನ್ ಐಜಿ ೫೦ ಗ್ರಾಂ ಹೊಂದಿದ ಎಂಪೋಟ್ರೇಟ್ ಕಂಪನಿಯ ಈ ಇಂಜಕ್ಷನ್ ಪಡೆದ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಬೆಂಗಳೂರಿನಲ್ಲಿ ಅಲರ್ಜಿ ಸೋಂಕಿಗೆ ಗುರಿಯಾದ ಹಿನ್ನೆಲೆಯಲ್ಲಿ ಈ ಎಲ್ಲಾ ಇಂಜಕ್ಷನ್‌ಗಳನ್ನು ಮರಳಿಸುವಂತೆ ಸೂಚಿಸಿದ ಕಾರಣಕ್ಕೆ ಇವುಗಳನ್ನು ನಿನ್ನೆ ಬೆಂಗಳೂರಿಗೆ ಮರಳಿಸಲಾಗಿದೆಂದು ಹೇಳಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧಿಗಳ ಕೊರತೆ ಸೋಂಕಿತರನ್ನು ಗಂಭೀರ ಸಮಸ್ಯೆಗೆ ಗುರಿಯಾಗುವಂತೆ ಮಾಡಿದೆ.
ಕಳೆದ ೧೫ ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆರಂಭದಲ್ಲಿ ೭ ಸಂಖ್ಯೆಯಲ್ಲಿದ್ದ ಬ್ಲ್ಯಾಕ್ ಫಂಗಸ್ ಕೇವಲ ಒಂದು ವಾರದಲ್ಲಿ ೫೫ ಸಂಖ್ಯೆಗೆ ಹೆಚ್ಚುವ ಮೂಲಕ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ. ಚಿಕಿತ್ಸೆಗೆ ಎಂಪೋಟೇರಿಸಿನ್ ಬಿ ಇಂಜಕ್ಷನ್ ಅತ್ಯಂತ ಪರಿಣಾಮಕಾರಿಯಾಗಿದೆ. ಆದರೆ, ಈ ಇಂಜಕ್ಷನ್‌ಗಳಲ್ಲಿಯೇ ಎರಡು ಮಾದರಿಯ ಇಂಜಕ್ಷನ್‌ಗಳು ಇರುವುದು ಸೋಂಕಿತರಿಗೆ ಇಂಜಕ್ಷನ್ ದೊರೆಯದೇ ಪರದಾಡುವಂತೆ ಮಾಡಿದೆ. ಔಷಧಿಯಿಲ್ಲದೇ ಜನರು ಆಸ್ಪತ್ರೆಯಲ್ಲಿ ನರಳುವಂತಹ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಕೊರೊನಾ ಮಹಾಮಾರಿಯ ಗಂಭೀರತೆ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಇಲ್ಲದಿರುವುದರಿಂದ ಔಷಧಿಯ ಕೊರತೆ ಸೋಂಕಿತರನ್ನು ತೀವ್ರವಾಗಿ ಬಾಧಿಸುವಂತೆ ಮಾಡಿದೆ.
ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ ಮತ್ತು ಚಿಕಿತ್ಸೆಯ ವಿವರಗಳನ್ನು ಬಹಿರಂಗ ಪಡಿಸುತ್ತಿಲ್ಲ. ಅತ್ತ ಔಷಧಿಯಿಲ್ಲದೇ, ಇತ್ತ ಬೇರೆಡೆ ಔಷಧಿಗಳು ದೊರೆಯದೇ, ಬ್ಲ್ಯಾಕ್ ಫಂಗಸ್ ಸೋಂಕಿತರು ತೀವ್ರ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಗೆ ಚಿಕಿತ್ಸೆಗಾಗಿ ಪೂರೈಸುವ ಔಷಧಿಗಳನ್ನು ಕಳಪೆ ಮಟ್ಟದಲ್ಲಿ ಪೂರೈಸಲಾಗುತ್ತಿದೆಯೇ ಎನ್ನುವ ಅನುಮಾನ ಚರ್ಚಗೆ ಗ್ರಾಸವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲೆಯ ಸಂಸದರು, ಶಾಸಕರಾಗಲಿ, ಬ್ಲ್ಯಾಕ್ ಫಂಗಸ್ ಸೋಂಕಿತರ ಚಿಕಿತ್ಸೆ ಬಗ್ಗೆ ಆಸಕ್ತಿ ಕಾಳಜಿ ತೋರದಿದ್ದರೇ, ಚಿಕಿತ್ಸೆ ಇಲ್ಲದೇ ಸಾಯುವುದು, ಅಸುನೀಗುವಂತಹ ಅಪಾಯ ಜಿಲ್ಲೆಯಲ್ಲಿದೆ.