೫೫೧ ಆಮ್ಲಜನಕ ಉತ್ಪಾದನಾ ಘಟಕ ಆರಂಭಕ್ಕೆ ನಿರ್ಧಾರ


ನವದೆಹಲಿ, ಏ.೨೫- ದೇಶದಲ್ಲಿ ಆಮ್ಲಜನಕ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಅನೇಕರ ಸೋಂಕಿತರು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ೫೫೧ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆರಂಭಿಸಲು ಕೇಂದ್ರ ಸರಕಾರ ಮುಂದಾಗಿದೆ.
ಪ್ರಧಾನಮಂತ್ರಿ ಕೇರ್ಸ್ ನಿಧಿ ಅಡಿ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಅಗತ್ತವಿರುವ ಕಡೆ ೫೫೧ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಅನುದಾನ ಹಂಚಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಆರಂಭದಲ್ಲಿ ಜಿಲ್ಲಾ ಕೇಂದ್ರಗಳು ಮತ್ತು ಜಿಲ್ಲಾಸ್ಪತ್ರೆಯ ಆವರಣದಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ತೆರೆಯಲು ಉದ್ದೇಶ ಹೊಂದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆಮ್ಲಜನಕ ಕೊರತೆ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ.
ಐಸಿಯು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರಿಗೆ ಆಮ್ಲಜನಕ ತೀರಾ ಅನಿವಾರ್ಯವಾಗಿದೆ ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆಮ್ಲಜನಕ ಸಿಗದೇ ಕೊರೋನಾ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪ್ರಧಾನ ಮಂತ್ರಿಗಳ ಕಚೇರಿ, ದೇಶದ ವಿವಿಧ ಭಾಗಗಳ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಆಮ್ಲಜನಕ ಘಟಕ ತೆರೆಯಲಾಗುವುದು. ಸರ್ಕಾರ ನಿಗದಿಪಡಿಸಿದ ಜಾಗದಲ್ಲಿ ಆಮ್ಲಜನಕ ಉತ್ಪಾದನೆ ಮಾಡಿ ಅದನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಅಗತ್ಯವಿರುವ ಕಡೆಗೆ ಹಂಚಿಕೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆರಂಭದಲ್ಲಿ ಜಿಲ್ಲಾಸ್ಪತ್ರೆಗಳ ಕೇಂದ್ರ ಕಚೇರಿಯಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆರಂಭಿಸಲಾಗುವುದು ಇದರಿಂದ ಆಯಾ ಜಿಲ್ಲೆಗಳಲ್ಲಿ ಆಮ್ಲಜನಕ ಕೊರತೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದೆ.
೫೫೧ ಆಮ್ಲಜನಕ ಉತ್ಪಾದನಾ ಘಟಕಗಳು ದೇಶದಲ್ಲಿ ಆರಂಭವಾದ ಬಳಿಕ ಸದ್ಯ ತಲೆದೋರಿರುವ ಆಮ್ಲಜನಕ ಪೂರೈಕೆ ಸಮಸ್ಯೆ ಬಗೆಹರಿಯಲಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ.
ದೇಶದಲ್ಲಿ ಆಮ್ಲಜನಕ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ವಿವಿಧ ದೇಶಗಳಿಂದ ಆಮ್ಲಜನಕವನ್ನು ತರಿಸಿಕೊಳ್ಳುವ ಪರಿಸ್ಥಿತಿಗೆ ಭಾರತ ಸಿಲುಕಿದೆ.
ಹೀಗಾಗಿ ದೇಶದಲ್ಲಿ ಆಮ್ಲಜನಕ ಉತ್ಪಾದಿಸಲು ಕೇಂದ್ರ ಸರ್ಕಾರ ಮುಂದಾಗಿದೆ