೫೩೪ ದಿನಗಳ ಬಳಿಕ ಸೋಂಕು ಕಡಿಮೆ

ನವದೆಹಲಿ,ನ.೨೨- ದೇಶದಲ್ಲಿ ಬಹಳ ದಿನಗಳ ನಂತರ ಅತಿ ಕಡಿಮೆ ಕೊರೊನಾ ಸೋಂಕು ಧೃಡಪಟ್ಟಿದ್ದು ತುಸು ನೆಮ್ಮದಿಯ ನಿಟ್ಟಿಸಿರು ಬಿಡುವಂತೆ ಮಾಡಿದೆ. ದೇಶದಲ್ಲಿ ಬರೋಬ್ಬರಿ ೫೩೪ ದಿನದ ನಂತರ ಕಡಿಮೆ ಸೋಂಕು ಕಾಣಿಸಿಕೊಂಡಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೮,೪೮೮ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೨೪೯ ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ೧೨,೫೧೦ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ದಾಖಲಾಗಿರುವ ಒಟ್ಟು ಸೋಂಕು ಸಂಖ್ಯೆಯ ಪೈಕಿ ಕೇರಳದಲ್ಲಿ ೫೦೮೦ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೪೦ ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ೭೯೦೮ ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಸಚಿವಾಲಯ ತನ್ನ ಅಧಿಕೃತ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.
ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ, ಒಟ್ಟು ಸೋಂಕಿತರ ಸಂಖ್ಯೆ ೩.೪೬ ಕೋಟಿಗೆ ಏರಿಕೆಯಾಗಿದೆ. ಜೊತೆಗೆ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾದವರ ಸಂಖ್ಯೆ ೩,೩೯,೩೪,೫೪೭ ಮಂದಿಗೆ ಏರಿಕೆಯಾಗಿದೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ದೇಶದಲ್ಲಿ ಸೋಂಕು ಸಂಖ್ಯೆ ಇಳಿಕೆಯಾಗಿ ಚೇತರಿಕೆ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ, ಸದ್ಯ ದೇಶದಲ್ಲಿ ಈ ಸಂಖ್ಯೆ ೧,೧೮,೪೪೩ ಮಂದಿಯಲ್ಲಿ ಇದೆ. ಒಟ್ಟಾರೆ ಸೋಂಕಿನ ಪೈಕಿ ಶೇ.೦.೩೪ ರಷ್ಟು ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿದ್ದು ೨೦೨೦ ರ ಮಾರ್ಚ್ ಬಳಿಕ ಅತಿ ಕಡಿಮೆ ಪ್ರಮಾಣ ಇದಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕೊರೊನಾ ಸೋಂಕಿನ ದಿನದ ಪಾಸಿಟಿವಿಟಿ ಪ್ರಮಾಣ ಶೇ.೧.೦೮ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೦.೯೩ ರಷ್ಟು ಇದೆ. ದೇಶದಲ್ಲಿ ಕೊರೊನಾ ಸೋಂಕಿಗೆ ದಿನದಿಂದ ದಿನಕ್ಕೆ ಲಸಿಕೆ ಪ್ರಮಾಣ ಹೆಚ್ಚು ಮಾಡುತ್ತಿದ್ದು ಇಲ್ಲಿಯ ತನಕ ೧೧೬.೮೭ ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಜೊತೆಗೆ ೬೩.೨೫ ಕೋಟಿ ಜನರಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ.

ಚೇತರಿಕೆ ಏರಿಕೆ
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸದ್ಯ ಈ ಪ್ರಮಾಣ ಶೇ.೯೮.೩೧ ರಷ್ಟು ಇದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ. ೨೦೨೦ರ ಮಾರ್ಚ್ ತಿಂಗಳ ಬಳಿಕ ಅತ್ಯಧಿಕ ಚೇತರಿಕೆ ಪ್ರಮಾಣ ಇದಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.