೫,೩೦೦ ಕೋಟಿ ರೂ. ವೆಚ್ಚದಲ್ಲಿ ೧೦೦ ಕಿ.ಮೀ. ರಾ. ಹೆದ್ದಾರಿ

ನವದೆಹಲಿ,ಏ.೧೧- ಜಮ್ಮು ಮತ್ತು ಕಾಶ್ಮೀರದ ಖಾನಬಾಲ್ ಮತ್ತು ಪಂಚತಾರ್ನಿ ನಡುವಿನ ೧೧೦ ಕಿಮೀ ರಾಷ್ಟ್ರೀಯ ಹೆದ್ದಾರಿಯನ್ನು ೫,೩೦೦ ಕೋಟಿ ರೂಪಾಯಿ ವೆಚ್ಚದಲ್ಲಿ ವಿಸ್ತರಣೆ ಮಾಡುವುದಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.

ಈ ವಿಸ್ತರಣೆಯಿಂದ ಶ್ರೀನಗರದಿಂದ ಪವಿತ್ರ ಅಮರನಾಥ ದೇಗುಲ ತಲುಪಲು ಯಾತ್ರಾರ್ಥಿಗಳ ಪ್ರಯಾಣದ ಸಮಯ ತೀವ್ರವಾಗಿ ಕಡಿಮೆ ಮಾಡಲಿದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ನಿರ್ಧಾರ ಪ್ರಕಟಿಸಿದ ಸಚಿವರು, ಯಾತ್ರಾರ್ಥಿಗಳಿಗಾಗಿ ಪಂಚತಾರ್ಣಿಯಿಂದ ಅಮರನಾಥ ದೇಗುಲದವರೆಗೆ ೫ ಕಿಮೀ ಕಾಂಕ್ರೀಟ್ ಕಾಲುದಾರಿ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

ಭದ್ರತಾ ಉದ್ದೇಶಗಳಿಗಾಗಿ ಎರಡೂ ಕಡೆ ಬ್ಯಾರಿಕೇಡ್ ಹಾಕಲಾಗುವುದು.ಸುಮಾರು ೫,೩೦೦ ಕೋಟಿ ರೂ.ವೆಚ್ಚದಲ್ಲಿ ಖಾನಬಾಲ್‌ನಿಂದ ಚಂದನವಾಡಿವರೆಗೆ ಮತ್ತು ನಂತರ ಚಂದನವಾಡಿಯಿಂದ ಪಂಚತಾರ್ಣಿ ಮೂಲಕ ಬಲ್ಟಾಲ್‌ಗೆ ೧೧೦ ಕಿಮೀ ಅಸ್ತಿತ್ವದಲ್ಲಿರುವ ಹೆದ್ದಾರಿಯ ಅಗಲೀಕರಣಕ್ಕೆ ವೆಚ್ಚ ಮಾಡುತ್ತೇವೆ ಎಂದಿದ್ದಾರೆ.

ಶೇಷನಾಗ್ ಮತ್ತು ಪಂಚತರಣಿ ನಡುವೆ ೧೦ ಕಿ.ಮೀ ಸುರಂಗವಿದ್ದು, ಯಾತ್ರಾರ್ಥಿಗಳಿಗೆ ಹಿಮಪಾತದ ಅಪಾಯ ತಪ್ಪಿಸಲು ಸಹಾಯ ಮಾಡುತ್ತದೆ. ಈ ಯೋಜನೆಗೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ ಎಂದಿದ್ದಾರೆ.

೭೫೦ ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಬಲ್ಟಾಲ್‌ನಿಂದ ಅಮರನಾಥದವರೆಗೆ ಹೊಸ ೯-ಕಿಮೀ ರೋಪ್‌ವೇ ನಿರ್ಮಾಣ ಮಾಡಲಾಗುವುದು. ನವೆಂಬರ್‍ನಲ್ಲಿ ಯೋಜನೆಯ ಟೆಂಡರ್ ಕರೆಯಲಾಗುವುದು.ಪ್ರವಾಸೋದ್ಯಮ ಉತ್ತೇಜಿಸುವ ಬೈಸರಾಂತೊದೊಂದಿಗೆ ಪಹಲ್ಗಾಮ್ ಅನ್ನು ಸಂಪರ್ಕಿಸುವ ಮತ್ತೊಂದು ರೂ ೧೨೫ ಕೋಟಿ ರೋಪ್‌ವೇ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಹೇಳಿದ್ದಾರೆ.

ಜಮ್ಮುವಿನ ಶಿವಖೇಡಿಯಲ್ಲಿರುವ ಯಾತ್ರಾಸ್ಥಳಕ್ಕೆ ೨ ಕಿಮೀ ರೋಪ್‌ವೇ ಕಾಮಗಾರಿ ಈ ವರ್ಷ ಮೇ ತಿಂಗಳಲ್ಲಿ ಪ್ರಾರಂಭವಾಗಲಿದೆ. ಶ್ರೀನಗರದ ಶಂಕರಾಚಾರ್ಯ ದೇವಸ್ಥಾನಕ್ಕೆ ರೋಪ್‌ವೇ ಸಂಪರ್ಕ ಕಲ್ಪಿಸುವ ಇನ್ನೊಂದು ಯೋಜನೆಗೆ ೬೦ ಕೋಟಿ ರೂ.ಗೆ ಜುಲೈನಲ್ಲಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದಾರೆ.

ಜಮ್ಮುವಿನ ಪೂಂಚ್ ಜಿಲ್ಲೆಯನ್ನು ಕಾಶ್ಮೀರದ ಶೋಪಿಯಾನ್‌ಗೆ ಸಂಪರ್ಕಿಸುವ ೬೦ ಕಿಮೀ ಉದ್ದದ ಮೊಘಲ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸುಮಾರು ೬,೮೪೨ ಕೋಟಿ ವೆಚ್ಚದಲ್ಲಿ ವಿಸ್ತರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.